ನಂಜನಗೂಡು: ಭತ್ತದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತರು ಕಂಗಲಾಗುತ್ತಿದ್ದಾರೆ. ಕೂಡಲೇ ಸರ್ಕಾರ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ಆಗ್ರಹಿಸಿದ್ದಾರೆ.

ನಂಜನಗೂಡು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಭತ್ತದ ಸುಗ್ಗಿ ನಡೆಯುತ್ತಿದೆ. ಭತ್ತ ಬೆಳೆದ ಬೆಳೆಗಾರರು ಉತ್ತಮ ಫಸಲು ಬೆಳೆದಿದ್ದಾರೆ. ಭತ್ತದ ದರದ ಏರಿಳಿತದಿಂದ ರೈತರು ಕಂಗಾಲಾಗಿದ್ದಾರೆ. ಮೊದಲು ಭತ್ತದ ಬೆಲೆ ಕ್ವಿಂಟಲ್ ಗೆ 3200 ನಿಗದಿಯಾಗಿತ್ತು. ಈಗ ಒಂದು ವಾರಕ್ಕೆ ಕಡಿಮೆಯಾಗಿದೆ. 2500ಕ್ಕೂ ಕೂಡ ಭತ್ತವನ್ನು ಖರೀದಿ ಮಾಡುತ್ತಿಲ್ಲ.

ಇದರಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ. ಪ್ರತಿ ಬೆಳೆಗಳಿಗೂ ವೈಜ್ಞಾನಿಕ ದರವನ್ನು ಸರ್ಕಾರ ನಿಗದಿ ಮಾಡಬೇಕು. ರೈತರು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ಎಕರೆಯಲ್ಲಿ ಭತ್ತದ ಬೆಳೆ ಬೆಳೆಯಲು ಸುಮಾರು 25 ಸಾವಿರ ರೂ.ವೆಚ್ಚ ತಗಲುತ್ತದೆ. ಭತ್ತಕ್ಕೆ ಬೆಂಬಲ ನೀಡಿದರೆ ರೈತರ ಬದುಕು ಸುಧಾರಿಸುತ್ತದೆ. ಫಸಲಿಗೆ ಉಪಯೋಗಿಸುವ  ಗೊಬ್ಬರಗಳಿಗೆ ಸರ್ಕಾರ ದರ ನಿಗದಿ ಮಾಡಿದ್ದಾರೆ.ಆದರೆ ಭತ್ತಕ್ಕೆ ಬೆಂಬಲ ಬೆಲೆ ಯಾಕಿಲ್ಲ? ಇಡೀ ರಾಜ್ಯದಲ್ಲಿ ಎಲ್ಲಾ ಭತ್ತದ ಬೆಳೆಗಾರರು ಸಮಸ್ಯೆಗಳಿಗೆ ಒಳಗಾಗಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭತ್ತದ ಬೆಳೆಗಾರರನ್ನು ರಕ್ಷಣೆ ಮಾಡಬೇಕಾಗಿದೆ. ಕೂಡಲೇ ಸರ್ಕಾರಗಳು ಭತ್ತದ ಬೆಳೆಗಾರರನ್ನು ಸಮಸ್ಯೆಗಳನ್ನು ಬಗೆಹರಿಸಬೇಕು. ಭತ್ತದ ದರವನ್ನು  ನಿಗದಿಪಡಿಸಬೇಕು. ಕಡಿಮೆ ದರದಲ್ಲಿ ಭತ್ತವನ್ನು ಖರೀದಿಸಿದರೆ ಕಾನೂನಾತ್ಮಕವಾಗಿ ಶಿಕ್ಷೆ ನೀಡುವ ಕಾನೂನನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು. ಭತ್ತದ ಬೆಳೆಗೆ ಎಂ.ಎಸ್.ಪಿ ದರವನ್ನು ನಿಗದಿ ಮಾಡಬೇಕು. ಅಲ್ಲದೆ ಇತರೆ ಪ್ರತಿ ಬೆಳೆಗಳಿಗೂ ದರನಿಗದಿ ಮಾಡಲು ಎಂ.ಎಸ್.ಪಿ ಕಾಯ್ದೆಯನ್ನು ಜಾರಿ ಮಾಡಬೇಕು. ಅದು ಶಾಶ್ವತವಾಗಿ ಇರಬೇಕು ಎಂದು ಆಗ್ರಹಿಸಿದರು.