ನಂಜನಗೂಡು: ನಗರದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಶ್ರೀ ಪರಶುರಾಮ ಕ್ಷೇತ್ರದ ಸುತ್ತ ಅಶುಚಿತ್ವ ತಾಂಡವವಾಡುತ್ತಿದ್ದು ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವ್ಯಾಪ್ತಿಗೆ ಶ್ರೀ ಪರಶುರಾಮ ದೇವಸ್ಥಾನವು ಕೂಡ ಒಳಪಟ್ಟಿದೆ. ಶ್ರೀ ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದು ಕ್ಷೇತ್ರಕ್ಕೆ ಭೇಟಿ ನೀಡದೆ ಹೋದರೆ ಪುಣ್ಯ ಲಭಿಸದು ಎಂಬುದು ಸಾವಿರಾರು ವರ್ಷಗಳಿಂದ ಪ್ರತಿತಿಯಾಗಿದೆ. ಹಾಗೆಯೇ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುವುದು ಪ್ರತಿದಿನ ಕಂಡು ಬರುತ್ತದೆ.

ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಪುನಸ್ಕಾರ ನೆರವೇರಿಸುವುದು ಮಾಮೂಲಿಯಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಸ್ಥಳದಲ್ಲಿ ಅಡುಗೆ ತಯಾರಿಸಿ ಸಂಬಂಧಿಕರನ್ನ ಕರೆದು, ಊಟ ಮಾಡಿ ತೆರಳುವುದು ಪ್ರತಿನಿತ್ಯ ಕಂಡು ಬರುವ ದೃಶ್ಯವಾಗಿದೆ. ಊಟದ ನಂತರ ಉಳಿದುಕೊಳ್ಳುವ ಕಸ, ಕಡ್ಡಿ,ಪ್ಲಾಸ್ಟಿಕ್ ವಸ್ತುಗಳನ್ನು ಹಾಕಲು ಸರಿಯಾದ ವ್ಯವಸ್ಥೆಯನ್ನು ಸ್ಥಳದಲ್ಲಿ ಕಲ್ಪಿಸದೆ ಇರುವುದು ಆವರಣ ಗಬ್ಬುನಾರಲು ಕಾರಣವಾಗಿದೆ.

ಸಂಬಂಧಪಟ್ಟ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಶ್ರೀ ಪರಶುರಾಮ ಕ್ಷೇತ್ರದ ಸುತ್ತ ಸ್ವಚ್ಛತೆಗೆ ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಪ್ರತಿನಿತ್ಯ ಶ್ರೀ ಪರಶುರಾಮ ಕ್ಷೇತ್ರಕ್ಕೂ ಭೇಟಿ ನೀಡುತ್ತಿದ್ದು, ಮತ್ತಷ್ಟು ಅಭಿವೃದ್ಧಿಯ ಅಗತ್ಯವಿದೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಸರಿಯಾದ ಸೂಕ್ತ ಸೌಲಭ್ಯಗಳಿಲ್ಲ. ಸ್ಥಳದಲ್ಲೇ ಅಡುಗೆ ತಯಾರು ಮಾಡುವ ಕಾರಣ ಅಡುಗೆ ಮನೆಗಳ ನಿರ್ಮಾಣವಾಗಿಲ್ಲ. ಎಲ್ಲೆಂದರಲ್ಲಿ ಭಕ್ತಾದಿಗಳು ಅಡಗೆ ತಯಾರಿಸುವ ದೃಶ್ಯ ಕಂಡು ಬರುತ್ತದೆ. ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪಗಳ ವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸ ಬೇಕಾಗಿದೆ.

ಕಪಿಲಾ ನದಿ ಸೇರುತ್ತಿರುವ ಕಸ
ಪರಶುರಾಮ ಕ್ಷೇತ್ರ ಕಪಿಲಾ ನದಿ ಸುಂದರ ತೀರದಲ್ಲಿದೆ. ಭಕ್ತಾದಿಗಳು ದರ್ಶನ ಪಡೆದು ಅಡುಗೆ ತಯಾರಿಸಿದ ನಂತರದ ಪ್ಲಾಸ್ಟಿಕ್, ಕಸ ಕಡ್ಡಿ ಗಳನ್ನು ಹಾಕಲು ಸರಿಯಾದ ವ್ಯವಸ್ಥೆಗಳು ಇಲ್ಲದ ಕಾರಣ ಭಕ್ತಾದಿಗಳು ನೇರವಾಗಿ ಕಪಿಲಾ ನದಿ ದಂಡೆಗೆ ಬಿಸಾಕುತ್ತಿರುವ ಕಾರಣ, ಕಪಿಲಾ ನದಿ ಮಲಿನಕ್ಕೆ ಕಾರಣವಾಗಿದೆ. ಭಕ್ತಾದಿಗಳು ಬಿಸಾಡುವ ಕಸ ಕಡ್ಡಿಗಳಿಗೆ ಪ್ರತಿನಿತ್ಯ ಬೆಂಕಿ ಹಾಕಲಾಗುತ್ತಿದ್ದು ಸುತ್ತಮುತ್ತಲಿನ ಪರಿಸರ ಕಲುಷಿತಗೊಳ್ಳುತ್ತಿದೆ. ಸಂಬಂಧಪಟ್ಟ ನಗರಸಭೆ ವತಿಯಿಂದ ಕಸ ಮತ್ತು ತ್ಯಾಜ್ಯಗಳನ್ನು ತೆರವು ಗೊಳಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈಗಾಗಲೇ ಶ್ರೀ ಪರಶುರಾಮ ದೇವಸ್ಥಾನದ ಆವರಣದಲ್ಲಿ ಶುಚಿತ್ವ ಕಾಪಾಡುವಂತೆ ಸೂಚಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು.
-ಸಿ.ಜೆ ಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ನಂಜನಗೂಡು.

ಶ್ರೀ ಪರಶುರಾಮ ಕ್ಷೇತ್ರ ಬಹಳ ಪ್ರಸಿದ್ಧಿ ಪಡೆದಿರುವ ಕ್ಷೇತ್ರವಾಗಿದೆ. ಪ್ರತಿನಿತ್ಯ ನೂರಾರು ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಜೊತೆಗೆ ಬೇರೆ ಬೇರೆ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳಿಗೆ ಆವರಣ ಗಬ್ಬುನರುತ್ತಿರುವುದು ಮುಜುಗರ ತರಿಸುತ್ತದೆ. ಸಂಬಂಧಪಟ್ಟವರು ಶುಚಿತ್ವ ಕಾಪಾಡುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಪ್ರತಿನಿತ್ಯ ಸೇರಿದಂತೆ ವಾರದ ರಜಾ ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಿರುತ್ತದೆ. ಪರಶುರಾಮ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಪೂಜೆ ಪುರಸ್ಕಾರ ನೆರವೇರಿಸಿ ಸ್ಥಳದಲ್ಲಿ ಅಡುಗೆ ತಯಾರಿಸಿ ಊಟ ಮಾಡಿ ಹೋಗುವುದು ವಾಡಿಕೆ ಯಾಗಿದೆ. ಈ ಸಂದರ್ಭದಲ್ಲಿ ಭಕ್ತಾದಿಗಳು ಉಪಯೋಗಿಸಿದ ಕಸ ಕಡ್ಡಿ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಪಕ್ಕದಲ್ಲಿರುವ ನದಿ ದಡದಲ್ಲಿ ಬಿಸಾಡುವುದರಿಂದ ಕಪಿಲಾ ನದಿ ಮಲಿನವಾಗುತ್ತದೆ.
-ಕೆ.ಜಿ ಬಸವಣ್ಣ, ಭಕ್ತಾದಿಗಳು ನಂಜನಗೂಡು.

ಸಿ.ಎಂ ಸುಗಂಧರಾಜು