ಮೈಸೂರು: ಗುಜರಿಯಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಉಸಿರಾಟದ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರಿನ ಹಳೆ ಕೆಸರೆಯಲ್ಲಿರುವ ಮಹಮದ್ ಎಂಬುವವರಿಗೆ ಸೇರಿದ ಗುಜರಿಯಲ್ಲಿ ನಡೆದಿದೆ.
ಘಟನೆಯಿಂದಾಗಿ ಹಳೆ ಕೆಸರೆಯಲ್ಲಿ ವಾಸವಾಗಿರುವ ಹಲವರು ಉಸಿರಾಟದ ತೊಂದರೆ, ಕೆಮ್ಮು, ವಾಂತಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಇವರುಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಅಲ್ಲದೇ ಆರೋಗ್ಯ ಇಲಾಖೆ ಸಿಬ್ಬಂದಿ ಸಹ ಸ್ಥಳಕ್ಕಾಗಮಿಸಿ ಘಟನೆಯಿಂದ ತೊಂದರೆಗೆ ಸಿಲುಕಿದವರ ಆರೋಗ್ಯ ತಪಾಸಣೆ ನಡೆಸಿದ್ದಾರೆ.
ನಗರದ ಹಳೆ ಕೆಸರೆಯಲ್ಲಿರುವ ಗುಜರಿ ಅಂಗಡಿಯಲ್ಲಿ ಮೂರು ತಿಂಗಳ ಹಿಂದೆ ದಾವಣಗೆರೆಯಿಂದ ಗುಜರಿ ಪದಾರ್ಥಗಳನ್ನು ಖರೀದಿಸಿ ತರಲಾಗಿತ್ತು. ಈ ವಸ್ತುಗಳಲ್ಲಿ ಕ್ಲೋರಿನ್ ಸಿಲಿಂಡರ್‌ಗಳು ಸಹ ಇದ್ದವು, ಈ ಪೈಕಿ ಒಂದರಲ್ಲಿ ಗ್ಯಾಸ್ ಇದ್ದು, ಇದನ್ನು ತುಂಡು ಮಾಡುವಾಗ ಸಿಲಿಂಡರ್‌ನ ಒಳಗಿದ್ದ ಕ್ಲೋರನ್ ಹೊರ ಬಂದಿದೆ.
ಪರಿಣಾಮ ಸಮೀಪದ ಮನೆಗಳಲ್ಲಿ ವಾಸಿಸುತ್ತಿದ್ದ ನಿವಾಸಿಗಳಲ್ಲಿ ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ರೀತಿಯ ತೊಂದರೆಗಳು ಕಾಣಿಸಿಕೊಂಡಿದೆ. ಸದ್ಯ ಇವರುಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆ ಸೇರಿದಂತೆ ಇನ್ನಿತರ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

