ನಂಜನಗೂಡು: ನಿಂತಿದ್ದ ಪೆಟ್ರೋಲ್ ಟ್ಯಾಂಕ್ ಲಾರಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಐದಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ನಂಜನಗೂಡು ಚಾಮರಾಜನಗರ ಮುಖ್ಯ ರಸ್ತೆಯ ದೊಡ್ಡ ಕವಲಂದೆ ಗ್ರಾಮದ ಕೃಷ್ಣರಾಜಪುರ ಬಳಿ ನಡೆದಿದೆ.
ಕೃಷ್ಣರಾಜಪುರ ಗ್ರಾಮದ ಬಳಿ ಇರುವ ಎಚ್ ಪಿ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಟ್ಯಾಂಕ್ ಲಾರಿ ಕೆಟ್ಟು ನಿಂತಿತ್ತು. ಮೈಸೂರು ಕಡೆಯಿಂದ ಚಾಮರಾಜನಗರಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಿಂಬದಿಯಿಂದ ಕೆಟ್ಟು ನಿಂತಿದ್ದ ಪೆಟ್ರೋಲ್ ಟ್ಯಾಂಕ್ ಲಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಸಾರಿಗೆ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್ಸಿನಲ್ಲಿದ್ದ ಚಾಲಕ ಸೇರಿದಂತೆ ಐದು ಮಂದಿಗೆ ಗಂಭೀರ ಗಾಯಗಳಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಕವಲಂದೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಆಂಬೂಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

