ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ನಿರೀಕ್ಷೆಗೂ ಮೀರಿದ ಪ್ರವಾಸಿಗರು ಆಗಮಿಸುತ್ತಿರುವುದು ಕಂಡು ಬರುತ್ತಿದ್ದು, ನಗರ ಸೇರಿದಂತೆ ಹೊರ ವಲಯದ ಪ್ರವಾಸಿತಾಣಗಳಲ್ಲಿ ಪ್ರವಾಸಿಗರು ಸಾಗರೋಪಾದಿಯಲ್ಲಿ ಕಂಡು ಬರುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ರಜೆಯಿದ್ದುದರಿಂದ ಪ್ರವಾಸಿಗರ ಸಂಖ್ಯೆ ದೊಡ್ಡಮಟ್ಟದಲ್ಲಿ ಕಂಡು ಬಂದಿತು.

ಶುಕ್ರವಾರ ಮನಮೋಹನ ಸಿಂಗ್ ನಿಧನ, 4ನೇ ಶನಿವಾರ ಹಾಗೂ ಭಾನುವಾರ ಸಾಲು ಸಾಲು ರಜೆ ಇದ್ದ ಹಿನ್ನೆಲೆಯಲ್ಲಿ ಮೈಸೂರು ಪ್ರವಾಸಿಗರಿಂದ ತುಂಬಿತುಳುಕುತ್ತಿತ್ತು. ರಸ್ತೆಗಳಲ್ಲಿ ವಾಹನ ದಟ್ಟಣೆ ಒಂದೆಯಾದರೆ, ನಗರದಲ್ಲಿರುವ ಎಲ್ಲಾ ಪ್ರವಾಸಿ ತಾಣಗಳು, ಹೋಟೆಲ್‌ಗಳು ಪ್ರವಾಸಿಗರಿಂದ ತುಂಬಿದ್ದವು. ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿನತ್ತ ಆಗಮಿಸಿದ್ದರು.

ವರ್ಷಾಂತ್ಯಕ್ಕೆ ಭೇಟಿ ನೀಡಿರುವ ಪ್ರವಾಸಿಗರು ಹೊಸವರ್ಷವನ್ನು ಮೈಸೂರಿನಲ್ಲಿಯೇ ಆಚರಿಸುವ ಸಲುವಾಗಿ ನಗರದಲ್ಲಿ ವಾಸ್ತವ್ಯ ಹೂಡಿದ್ದು, ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಸೋಮನಾಥ ದೇವಾಲಯ, ಟಿಬೇಟಿಯನ್ ಕ್ಯಾಂಪ್, ತಲಕಾಡು, ನಂಜನಗೂಡು ಶ್ರೀಕಂಠೇಶ್ವರ ದೇಗುಲ, ಮೈಸೂರು ಅರಮನೆ, ನಾಗರಹೊಳೆ ಅಭಯಾರಣ್ಯ, ಕೆಆರ್‌ಎಸ್, ಚಾಮರಾಜೇಂದ್ರ ಮೃಗಾಲಯ, ದಸರಾ ವಸ್ತುಪ್ರದರ್ಶನ ಹೀಗೆ ಎಲ್ಲೆಡೆ ಭೇಟಿ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.

ಮೈಸೂರಿಗೆ ಪ್ರವಾಸಿಗರು ಹರಿದು ಬಂದಿದ್ದರಿಂದ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಜತೆಗೆ ಪ್ರಾವಸೋದ್ಯಮವನ್ನೇ ನಂಬಿರುವ ಪ್ರವಾಸಿ ಟ್ಯಾಕ್ಸಿ , ಆಟೋ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳು, ಮಾಲ್, ಚಿತ್ರಮಂದಿರ, ಸಾರಿಗೆ ಸೇರಿದಂತೆ ಎಲ್ಲಾ ವಲಯಗಳಲ್ಲೂ ವ್ಯಾಪಾರ ಚಟುವಟಿಕೆ ಗರಿಗೆದರಿದೆ. ಒಟ್ಟಾರೆ ಪ್ರವಾಸಿಗರು ಮೈಸೂರಿಗೆ ಆಗಮಿಸಿ ಖುಷಿ ಪಡುತ್ತಿರುವುದು ಎದ್ದು ಕಾಣಿಸುತ್ತಿದೆ.