ಮೈಸೂರು: ಹುಲಿಯೊಂದು ಅಡ್ಡಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಸರಗೂರು ತಾಲ್ಲೂಕಿನ ಬೀರ್ ವಾಳ್ ಗ್ರಾಮದಲ್ಲಿ ನಡೆದಿದ್ದು, ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ.
ತಾಲ್ಲೂಕಿನ ಗ್ರಾಮದ ಬೀರ್ ವಾಳು ಗ್ರಾಮದ ರೈತ ದಾಸೇಗೌಡ ಎಂಬವರ ತೋಟದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಬುಧವಾರ ರಾತ್ರಿ ಹುಲಿಯೊಂದು ಅವರ ಜಮೀನಿನಲ್ಲಿ ಸಂಚರಿಸಿರುವ ದೃಶ್ಯ ಸೆರೆಯಾಗಿದ್ದು, ಹುಲಿ ಹೆಜ್ಜೆ ಗುರುತು ಕೂಡ ಜಮೀನಿನಲ್ಲಿ ಕಂಡು ಬಂದಿದೆ. ಇದನ್ನು ಗಮನಿಸಿದ ರೈತ ದಾಸೇಗೌಡರು ಆತಂಕಗೊಂಡಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಜತೆಗೆ ಗ್ರಾಮಸ್ಥರು ಎಚ್ಚರವಾಗಿರುವಂತೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದು, ಕಳೆದ ಬಾರಿಯು ಅಕ್ಕಪಕ್ಕದ ಜಮೀನುಗಳಲ್ಲಿ ಚಿರತೆ ದಾಳಿಗೆ ಜಾನುವಾರುಗಳು ಬಲಿಯಾಗಿದ್ದಾಗಲೂ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿತ್ತು. ಆದರೆ ಅರಣ್ಯ ಇಲಾಖೆಯು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಪ್ರಾಣಿಗಳು ಬಂದಾಗ ಪಟಾಕಿ ಸಿಡಿಸಿ ಎಂದು ಪಟಾಕಿ ಕೊಡುತ್ತಾರೆ, ಆದರೆ ಅದು ಸಿಡಿಯುವುದೇ ಇಲ್ಲ. ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವ ಆತಂಕ ಇದೆ. ಕೂಡಲೇ ಅರಣ್ಯ ಇಲಾಖೆಯವರು ಅನಾಹುತ ಸಂಭವಿಸುವ ಮುನ್ನ ಕ್ರಮಕ್ಕೆ ಮುಂದಾಗಬೇಕು ಎಂದು ರೈತ ದಾಸೇಗೌಡ ಆಗ್ರಹಿಸಿದ್ದಾರೆ.

