ನಂಜನಗೂಡು: ತಗಡೂರು ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ವಿಜ್ಞಾನ ಪಿಯು ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ನಡೆಸಿದ ಪ್ರತಿಭಟನೆಗೆ ಸರ್ಕಾರ ಮಣಿದಿದೆ.

ವಿದ್ಯಾರ್ಥಿಗಳು ನಡೆಸಿದ ಬೃಹತ್ ಪ್ರತಿಭಟನೆಗೆ ಪೋಷಕರು ಸಾಥ್ ನೀಡಿದ್ದರು.  ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು‌. ಪ್ರಾಂಶುಪಾಲೆ ವಸಂತಕುಮಾರಿ, ಪ್ರಭಾರ ನಿಲಯ ಪಾಲಕ ಮಹದೇವಪ್ಪ, ಗಣಿತ ಶಿಕ್ಷಕ ಮಂಜುನಾಥ್ ಅಮಾನತುಗೊಂಡವರು.

ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ. ಇನ್ನೂ ಅತಿಥಿ ಶಿಕ್ಷಕ ಗುರುಸ್ಮಾಮಿ ಎಂಬಾತ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರುವುದು ಹಾಗೂ ಜಾತಿ ತಾರತಮ್ಯ ಮಾಡುತ್ತಿರುವುದರ ಬಗ್ಗೆ ವಿದ್ಯಾರ್ಥಿಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ವಿಜ್ಞಾನ ಅತಿಥಿ ಶಿಕ್ಷಕ ಗುರುಸ್ವಾಮಿ ಎಂಬಾತನನ್ನು ಕರ್ತವ್ಯದಿಂದ ವಜಾಗೊಳಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ.ಎಸ್ ಕಾಂತರಾಜು ರವರು ಆದೇಶ ಹೊರಡಿಸಿದ್ದಾರೆ.