ನಂಜನಗೂಡು: ಹುಲಿ ದಾಳಿಗೆ ಮೂರು ಹಸುಗಳು ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತರಾದ ನಿಜಲಿಂಗಪ್ಪ ಮತ್ತು ಮಹೇಶ್ ಎಂಬ ರೈತರ ಮೂರು ಹಸುಗಳ ಮೇಲೆ ಹುಲಿ ದಾಳಿ ನಡೆಸಿದೆ. ಕಳೆದ 15 ದಿನಗಳಿಂದ ಮಡುವಿನಹಳ್ಳಿ ಮತ್ತು ಹಾಡ್ಯ ಗ್ರಾಮಗಳ ಸುತ್ತಮುತ್ತ ಹುಲಿ ಕಾಣಿಸಿಕೊಂಡು ಗ್ರಾಮಸ್ಥರು ಭಯ ಭೀತಿಯಲ್ಲಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೋನು ಇರಿಸಿ, ಕ್ಯಾಮರಾ ಅಳವಡಿಸಿದ್ದರು. ಕ್ಯಾಮರಾದಲ್ಲಿ ಹುಲಿಗಳ ಚಲನ ವಲನ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನಲ್ಲೆ ಹಸುಗಳ ಮೇಲೆ ದಾಳಿ ಮಾಡಿ ನಿಜಲಿಂಗಪ್ಪ ಎಂಬುವರಿಗೆ ಸೇರಿದ ಒಂದು ಹಸುವನ್ನು ಕೊಂದು ಮಹೇಶ್ ಎಂಬ ರೈತರಿಗೆ ಸೇರಿದ ಮತ್ತೆರಡು ಹಸುಗಳ ಮೇಲೂ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.

ಸ್ಥಳಕ್ಕೆ ಆಗಮಿಸಿದ ಹೆಡಿಯಾಲ ಉಪವಲಯ ಅರಣ್ಯ ಅಧಿಕಾರಿಗಳಾದ ಕಾರ್ತಿಕ್, ಕಿರಣ್ ಸ್ಥಳ ಪರಿಶೀಲಿಸಿ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಮೇಲಾಧಿಕಾರಿಗಳು, ಶಾಸಕರು ಇತ್ತ ಗಮನ ಹರಿಸಿ, ಹುಲಿಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.