ನಂಜನಗೂಡು: ಚಾಮಲಾಪುರ ಹುಂಡಿ ಗ್ರಾಮದ ಡಕ್ ನಿರ್ಮಾಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ಯಾಮಾರಿಸಿ ಸ್ಟೇ ತಂದಿದ್ದಾರೆ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಎಂ ಶಂಕರ್ ಹೇಳಿದರು.
ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಎಂ ಶಂಕರ್ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮಲಾಪುರ ಹುಂಡಿ ಗ್ರಾಮದ ಸರ್ವೆ ನಂಬರ್ 220 ರಲ್ಲಿ ಬರುವ ಖಾಸಗಿ ಜಮೀನನ್ನು ಕಾಂಗ್ರೆಸ್ ಮುಖಂಡರೊಬ್ಬರು ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ನನ್ನ ಮೇಲೆ ಆರೋಪ ಕೇಳಿ ಬಂದಿದೆ. ನಾನು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಯಾವುದೇ ದಬ್ಬಾಳಿಕೆ ದೌರ್ಜನ್ಯ ಮಾಡಿಲ್ಲ.
ನಗರಸಭೆಯಲ್ಲಿ 2 ಬಾರಿ ಸದಸ್ಯನಾಗಿದ್ದೆ. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ 20 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೆ ಕೆಲವರು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಇದು ಸತ್ಯಕ್ಕೆ ದೂರವಾದ ಮಾತು. ಚಾಮಲಾಪುರ ಹುಂಡಿ ಗ್ರಾಮದ ಸರ್ವೆ ನಂಬರ್ 220 ರಲ್ಲಿ ಮರಮ್ಮ ಎಂಬುವವರಿಗೆ ಸೇರಿದ ಜಮೀನು ಎಂದು ಸುಳ್ಳು ದಾಖಲಾತಿಗಳನ್ನು ಮಾಡಿಕೊಂಡಿದ್ದಾರೆ.
ಮೂಲತಹ ಇದು ನಮ್ಮ ಮುತ್ತಾತ ಮಷಣೇ ಗೌಡ ಎಂಬುವರಿಗೆ ಸೇರಿದ ಜಮೀನಾಗಿದೆ. ಮರಮ್ಮ ಎಂಬುವವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಮಾಡಿಕೊಂಡಿದ್ದರು. ಮೂಲ ನೋಡಿದರೆ ಇದು ನಮ್ಮ ವಂಶಸ್ಥರ ಜಾಗವಾಗಿದೆ. ನಾನು ನಗರಸಭಾ ಸದಸ್ಯನಾಗಿದ್ದ ಸಂದರ್ಭದಲ್ಲಿ ಯುಜಿಡಿ ಕಾಮಗಾರಿ ಮಾಡಲು ನಾವೇ ನಮ್ಮ ಜಾಗವನ್ನು ಬಿಟ್ಟುಕೊಟ್ಟಿದ್ದೇವೆ. ಮರಮ್ಮ ಎಂಬುವವರ ಕುಟುಂಬಸ್ಥರು ನಮಗೆ ಸೇರಿದೆ ಎಂದು ಹೇಳುತ್ತಿರುವುದು ಸುಳ್ಳು.
ಈ ಬಗ್ಗೆ ನಾನು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಂಡು ಮರಮ್ಮ ಅವರ ಅರ್ಜಿಯನ್ನು ವಜಾ ಮಾಡಿ, ಕಾನೂನಿನ ಪ್ರಕಾರ ನಮ್ಮ ಪರವಾಗಿ ಆದೇಶ ಮಾಡಿದ್ದಾರೆ. ಮರಮ್ಮ ಅವರು ನ್ಯಾಯಾಲಯಕ್ಕೆ ತಪ್ಪು ದಾಖಲಾತಿಗಳನ್ನು ಕೊಟ್ಟು, ಹಳೇ ಆರ್ ಟಿ ಸಿಯನ್ನು ನೀಡಿ ಕೋರ್ಟ್ ಅನ್ನು ಯಾಮಾರಿಸಿ ಸ್ಟೇ ತಂದಿದ್ದಾರೆ. ನಕಲಿ ದಾಖಲೆಗಳನ್ನು ನೀಡಿ ಆರ್ ಟಿ ಸಿ ಯಲ್ಲಿ ಮರಮ್ಮ ಎಂಬುವವರ ಹೆಸರು ನಮ್ಮದಾಗಿತ್ತು.
ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ಆದೇಶವಾದ ನಂತರ ನಮ್ಮ ಮುತ್ತಾತ ಮಷಣೇ ಗೌಡ ಎಂದು ಪಹಣಿಯಲ್ಲಿ ಹೆಸರು ನಮ್ಮದಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಮಾಡಿಸಿಕೊಂಡಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಿಂದ ನನಗೆ ಮಾನಸಿಕವಾಗಿ ತೊಂದರೆಯಾಗಿದೆ. ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನನಗೆ ಕೊಲೆ ಬೆದರಿಕೆ ಇರುವ ಬಗ್ಗೆ ಪೊಲೀಸ್ ಇಲಾಖೆಗೂ ವಿಡಿಯೋ ಸಮೇತ ಮಾಹಿತಿ ನೀಡಿದ್ದೇನೆ. ಪೊಲೀಸರು ನನಗೆ ಸೂಕ್ತ ರಕ್ಷಣೆ ಕೊಡಬೇಕು. ಈ ಹಿಂದೆ ಡಕ್ ಹೊಡೆದು ಹಾಕಿದ್ದಾರೆ ಅವರ ಮೇಲೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಬೇಕು. ನಗರಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆ ಮತ್ತು ಡಕ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

