ಮೈಸೂರು: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಡಾ.ಹೆಚ್.ಸಿ ಮಹದೇವಪ್ಪ ಕಾಂಗ್ರೆಸ್ ಪಕ್ಷ ತೊರೆಯಲಿದ್ದಾರೆ ಎಂಬ ಚರ್ಚೆಗಳ ನಡುವೆ ಅವರ ಪುತ್ರ, ಸಂಸದ ಸುನಿಲ್ ಬೋಸ್ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ನಮ್ಮ ಕುಟುಂಬಕ್ಕೆ ಯಾವುದೇ ಅನ್ಯಾಯ, ಮೋಸ ಮಾಡಿಲ್ಲ. ನಮ್ಮ ತಂದೆಯವರನ್ನು ಮಂತ್ರಿಯನ್ನಾಗಿ ಮಾಡಿ ಗೌರವದಿಂದ ನಡೆಸಿಕೊಂಡಿದೆ. ನಾವು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇವೆ. ಮುಂದೆಯೂ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸುತ್ತೇವೆ. ಪಕ್ಷ ಬಿಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷಾಂತರ ಮಾಡುವವರು 2027ರಲ್ಲಿ ಮಾಡಬಹುದು ಎಂದು ಈಗಾಗಲೇ ತಿಳಿಸಿದ್ದೇನೆ. ಆದರೆ ನಮ್ಮ ಕುಟುಂಬ ಪಕ್ಷ ಬಿಡುವ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.

ಇನ್ನು ಯತೀಂದ್ರ ಸಿದ್ದರಾಮಯ್ಯ ಅವರು ಮಹದೇವಪ್ಪ ಅವರನ್ನು ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿದ ಸುನಿಲ್ ಬೋಸ್, ನಮ್ಮ ತಂದೆ ಹಿರಿಯ ನಾಯಕರಾಗಿದ್ದು, ಹಲವರು ಸೌಹಾರ್ದಯುತವಾಗಿ ಭೇಟಿಯಾಗಿ ಸಲಹೆ, ಸೂಚನೆ ಪಡೆಯುತ್ತಾರೆ. ಯತೀಂದ್ರ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಭೇಟಿಯಾಗಿದ್ದಾರೆ. ಇದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮೈಸೂರಿನಲ್ಲಿ ತಿಳಿಸಿದರು.