ನಂಜನಗೂಡು: ಕ್ಷುಲಕ ಕಾರಣಕ್ಕೆ ಯುವಕರ ಗುಂಪು ಲಾಂಗು ಮಚ್ಚು ಹಿಡಿದು ಹೊಡೆದಾಡಿದ್ದಾರೆ. ತಮಾಷೆಗಾಗಿ ವ್ಯಕ್ತಿಯನ್ನು ರೇಗಿಸುತ್ತಿದ್ದೆ ಹಲ್ಲೆಗೆ ಕಾರಣವಾಗಿದ್ದು, ನಡು‌ರಸ್ತೆಯಲ್ಲಿ ಲಾಂಗು ಮಚ್ಚು ಹಿಡಿದವರನ್ನು ಕಂಡು ನಂಜನಗೂಡು ಜನ ಬೆಚ್ಚಿ ಬಿದ್ದಿದ್ದಾರೆ. ದಿನೇ ದಿನೆ ಕಾನೂನು ಸುವ್ಯವಸ್ಥೆ ಹಾಳಾಗುತ್ತಿರುವುದಕ್ಕೆ ನಂಜನಗೂಡು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಭಾಷ್ ಅಲಿಯಾಸ್ ಸುಬ್ಬು, ಆಕಾಶ್ ಅಲಿಯಾಸ್ ಮಿಂಡ್ರಿ, ಸತ್ಯ, ಮಂಟಿ ಬಂಧಿತ ಆರೋಪಿಗಳು. ನಂಜನಗೂಡು ನಗರದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಮುಂಭಾಗವೇ ಮಾರಕಾಸ್ತ್ರಗಳಿಂದ ಹೊಡೆದಾಟ ಮಾಡಲಾಗಿದೆ. ಹಳೆ ಗಲಾಟೆ ವಿಷಯಕ್ಕೆ ಲಾಂಗ್ ಹಿಡಿದು ಅಟ್ಟಾಡಿಸಿದ ಕುಡಿ ಮೀಸೆಯ ಯುವಕರ ಹೊಡೆದಾಟದ ವಿಡಿಯೋ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿ ನಂಜನಗೂಡು ಪೊಲೀಸರನ್ನು ನಿದ್ರೆಗೆಡಿಸಿದೆ.

ವರಮಹಾಲಕ್ಷ್ಮಿ ಹಬ್ಬದ ದಿನ ರಾತ್ರಿ ನಂಜನಗೂಡು ತಾಲ್ಲೂಕು ಆಸ್ಪತ್ರೆ ಮುಂಭಾಗ ಲಾಂಗು, ರಾಡುಗಳು ಝಳಪಿಸಿದೆ. ಆಟೋದಲ್ಲಿ ಬಂದ ನಾಲ್ಕು ಜನ ಯುವಕರ ಗುಂಪು ಇಬ್ಬರು ಯುವಕರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಕಬ್ಬಿಣದ ರಾಡ್ ‌ನಿಂದ ಹಲ್ಲೆ‌ ನಡೆಸಿ, ಲಾಂಗ್ ಹಿಡಿದು ಬೀದಿ ಬೀದಿಯಲ್ಲಿ ಓಡಾಡಿಸಿದ್ದಾರೆ. ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಅಭಿಷೇಕ್ ಹಾಗೂ ರವಿ ಎಂಬುವರ ಮೇಲೆ ದಾಳಿ ನಡೆದಿದ್ದು, ನಂಜನಗೂಡಿನ ಸುಭಾಷ್ ಅಲಿಯಾಸ್ ಸುಬ್ಬುA1, ಆಕಾಶ್ ಅಲಿಯಾಸ್ ಮಿಂಡ್ರಿ A2, ಸತ್ಯ A3, ಮಂಟಿ A4 ಅಟ್ಯಾಕ್ ಮಾಡಿದ್ದಾರೆ. ಹಲ್ಲೆಯ ಭೀಕರ ದೃಶ್ಯಗಳು ನಂಜನಗೂಡು ಜನರನ್ನು ತಲ್ಲಣ ಗೊಳಿಸಿದೆ.

ಹಲ್ಲೆಗೊಳಗಾದ ಅಭಿಷೇಕ್ ನಂಜನಗೂಡಿನ ಶ್ರೀರಾಂಪುರದ ಯುವತಿಯನ್ನ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ವರಮಹಾಲಕ್ಷ್ಮಿ ಹಬ್ಬಕ್ಕೆ ಪತ್ನಿ ಮನೆಗೆ ಬಂದಿದ್ದ. ಈ ವೇಳೆ ಸಂಬಂಧಿಕರ ಮಗ ರವಿಗೆ ಅನಾರೋಗ್ಯ ಕಾರಣ ನಂಜನಗೂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಅಲ್ಲಿಗೆ ಬಂದ ನಾಲ್ವರ ಗುಂಪು ಅಭಿಷೇಕ್ ಹಾಗೂ ರವಿ ಮೇಲೆ  ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಮಾಡಿರುವ ಆರೋಪಿಗಳು ಹಲವು ದಿನಗಳಿಂದ ಅಭಿಷೇಕ್ ಸಂಬಂಧಿ ಶಶಿಕುಮಾರ್ ನನ್ನು ಕಪಿ ಎಂದು ಛೇಡಿಸುತ್ತಿದ್ದರು. ಈ ಬಗ್ಗೆ ಶಶಿಕುಮಾರ್ ತಾಯಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಆರೋಪಿಗಳು ಶಶಿಕುಮಾರ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದರು. ಅದೇ ದ್ವೇಷದಲ್ಲಿ ರಾತ್ರಿ ಶಶಿಕುಮಾರ್ ಮೇಲೆ ಹಲ್ಲೆ ಮಾಡಲು ಬಂದಿದ್ದರು. ಶಶಿಕುಮಾರ್ ಸಿಗದಿದ್ದಾಗ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯನ್ನು ಕಂಡು ಬೆಚ್ಚಿ ಬಿದ್ದಿರುವ ನಂಜನಗೂಡು ನಾಗರಿಕರು ಕಾನೂನು ಸುವ್ಯವಸ್ಥೆ ಸರಿ ಪಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಒಟ್ಟಾರೆ ಹಳೆ ದ್ವೇಷಕ್ಕೆ ನಡು ರಸ್ತೆಯಲ್ಲೇ  ಲಾಂಗು ಹಿಡಿದು ಗಲಾಟೆ ಮಾಡಿದ್ದು, ನಂಜನಗೂಡು ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಸದ್ಯ ಆರೋಪಿಗಳನ್ನು ನಂಜನಗೂಡು ಪಟ್ಟಣ ಪೊಲೀಸ್ಳರು ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.