ನಂಜನಗೂಡು: ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಮೈಸೂರು ಜಿಲ್ಲೆ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವದ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ವರಪೂಜೆ ಹಾಗೂ ಇತರೇ ಪೂಜಾ ಕೈಂಕರ್ಯಗಳಲ್ಲಿ ಅನೇಕ ರೀತಿಯ ಧಾರ್ಮಿಕ ವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ನಡೆಯಿತು.
ವಿದ್ಯುತ್ ದೀಪಲಂಕಾರದೊಂದಿಗೆ ಕಂಗೊಳಿಸುತ್ತಿರುವ ದೇವಾಲಯದಲ್ಲಿ ಕಲ್ಯಾಣೋತ್ಸವದ ಸಡಗರ ಕಳೆಕಟ್ಟಿದೆ. ಕಲ್ಯಾಣೋತ್ಸವದ ವೈಭವ ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದು ಬರುತ್ತಿದೆ. ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ವರಪೂಜೆಯ ಧಾರ್ಮಿಕ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತ ರೀತಿಯಲ್ಲಿ ನಡೆದು, ನೂರಾರು ಭಕ್ತರು ಪಾಲ್ಗೊಂಡು ಧನ್ಯತರಾದರು.
ಆಷಾಢ ಮಾಸದಲ್ಲಿ ಜರುಗುವ ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ಶ್ರೀಕಂಠೇಶ್ವರ ಹಾಗೂ ಪಾರ್ವತಿ ದೇವಿ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಈ ಹಿಂದಿನಿಂದಲೂ ನಡೆಸುತ್ತಾ ಬಂದಿದ್ದು, ಮಂಗಳವಾದ್ಯ, ಸಪ್ತನಾದಸ್ವರದೊಂದಿಗೆ ನಡೆದ ಪೂಜಾ ಕೈಂಕರ್ಯದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಜಗದೀಶ್ ಕುಮಾರ್ ಸೇರಿ ನೂರಾರು ಭಕ್ತರು ಪಾಲ್ಗೊಂಡು ಕಣ್ತುಂಬಿಕೊಂಡರು.

