ನಂಜನಗೂಡು: ಮಾತನಾಡಲು ಬಾಯಿ ಇಲ್ಲ, ನೋವನ್ನು ಹೇಳಿಕೊಳ್ಳಲು ಧ್ವನಿ ಇಲ್ಲ, ಕಣ್ಣೀರನ್ನು ಒರೆಸಲು ಯಾರೂ ಇಲ್ಲ, ಮಳೆ ಬಂದರೆ ನೆನೆಯಲೇಬೇಕು, ಮನೆ ಕುಸಿಯುವ ಭಯದಲ್ಲೇ ಮಲಗಬೇಕು. ಬದುಕಿರುವುದೇ ಒಂದು ಹೋರಾಟವಾಗಿದೆ. ಕಣ್ಣೆದುರೇ ಮನೆ ಕುಸಿಯುತ್ತಿದ್ದರೂ ಅದನ್ನು ಸರಿಪಡಿಸಿಕೊಳ್ಳಲು ಶಕ್ತಿಯಿಲ್ಲದೆ, ನೆರವಿಗಾಗಿ ಯಾರಾದರೂ ಬರುತ್ತಾರೆಯೇ ಎಂದು ಕಾಯುತ್ತಿರುವ ನಾಲ್ವರು ಮೂಕ ಜೀವಿಗಳ ಬದುಕು ನೋಡುಗರ ಕಣ್ಣಲ್ಲಿ ನೀರು ತರಿಸುವಂತಿದೆ.

ಹೌದು.. ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಸ್ಥಿತಿ ಕಂಡುಬಂದಿದೆ. ದಿವಂಗತ ಚಿನ್ನಣ್ಣ ಹಾಗೂ ಜಾನಕಮ್ಮ ದಂಪತಿಯ ಆರು ಮಕ್ಕಳ ಪೈಕಿ ಐವರು ಮೂಕರಾಗಿದ್ದು, ತಂದೆ-ತಾಯಿ ನಿಧನದ ಬಳಿಕ ನಾಲ್ವರು ಮೂಕರು ಹಳೆಯ ಮನೆಯಲ್ಲೇ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಇದೀಗ ವಯಸ್ಸಾದ ಕಾರಣ ದುಡಿಯಲು ಸಾಧ್ಯವಾಗುತ್ತಿಲ್ಲ, ವಾಸಿಸುವ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಹರಿದ ಚಾವಣಿಯಿಂದ ಮಳೆ ಬಂದರೆ ಮನೆಯೊಳಗೆ ನೀರು ತುಂಬುತ್ತದೆ. ಗ್ಯಾಸ್ ಇಲ್ಲದೆ ಸೌದೆ ಒಲೆಯಲ್ಲೇ ಅಡುಗೆ, ಮಲಗಲು ಸರಿಯಾದ ಜಾಗವಿಲ್ಲ. ಯಾವ ಕ್ಷಣದಲ್ಲಾದರೂ ಕುಸಿಯುವ ಸ್ಥಿತಿಯಲ್ಲಿರುವ ಮನೆಯಲ್ಲಿ ಜೀವ ಭಯದಲ್ಲೇ ದಿನ ಕಳೆಯುತ್ತಿದ್ದಾರೆ.

ಮಾತು ಇಲ್ಲ, ಕೇಳುವ ಶಕ್ತಿ ಇಲ್ಲ. ತಮ್ಮ ನೋವನ್ನು ಅಧಿಕಾರಿಗಳ ಮುಂದೆ ಹೇಳಿಕೊಳ್ಳುವ ಸಾಮರ್ಥ್ಯವೂ ಇಲ್ಲ. ಅನಾರೋಗ್ಯ, ಬಡತನ ಹಾಗೂ ವಯಸ್ಸಿನ ನಡುವೆ ಈ ನಾಲ್ಕು ಮೂಕ ಜೀವಗಳು ಆಸರೆಗಾಗಿ ಎದುರು ನೋಡುತ್ತಿವೆ. ವಿಶೇಷ ಚೇತನರಿಗೆ ಸರ್ಕಾರದ ಹಲವು ಸೌಲಭ್ಯಗಳು ಹಾಗೂ ಅನುದಾನಗಳಿದ್ದರೂ, ಈ ಕುಟುಂಬಕ್ಕೆ ಮಾತ್ರ ಅವು ತಲುಪದಿರುವುದು ದುರಂತವೇ ಸರಿ. ಹುಲ್ಲಹಳ್ಳಿಯಂತಹ ದೊಡ್ಡ ಗ್ರಾಮದಲ್ಲಿ ಇವರದ್ದು ಒಂದೇ ಕುಟುಂಬವಾಗಿದ್ದು, ಬಂಧು-ಬಳಗದ ಆಸರೆಯೂ ಇಲ್ಲದಂತಾಗಿದೆ. ಚುನಾವಣೆ ಬಂದಾಗ ಮತ ಕೇಳಲು ಬರುವ ರಾಜಕಾರಣಿಗಳಿಗೆ ಇವರ ಕಣ್ಣೀರು ಕಾಣುವುದಿಲ್ಲವೇ? ಎಂಬ ಪ್ರಶ್ನೆ ಇದೀಗ ಗ್ರಾಮಸ್ಥರನ್ನು ಕಾಡುತ್ತಿದೆ.
ಕ್ಷೇತ್ರದ ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಕೂಡಲೇ ಈ ಕುಟುಂಬದ ಮನೆಗೆ ಭೇಟಿ ನೀಡಬೇಕಿದೆ. ಸರ್ಕಾರದ ನೆರವಿನೊಂದಿಗೆ ಸುರಕ್ಷಿತ ಸೂರು ಹಾಗೂ ಜೀವನೋಪಾಯಕ್ಕೆ ಅಗತ್ಯ ಸಹಾಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರು ಹಾಗೂ ನಮ್ಮ ವಾಹಿನಿಯ ಆಶಯವಾಗಿದೆ.
-ಸಿ.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು.

