ಮೈಸೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ವಿಚಾರದಲ್ಲಿ ಸರ್ಕಾರ ಪೊಲೀಸರನ್ನು ಛೂ ಬಿಡುವ ಕೆಲಸ ಮಾಡಿದ್ದು, ರಾಜ್ಯದಲ್ಲಿ ತಾಲಿಬಾನಿ ಸರ್ಕಾರ ಬಂದಿರುವುದರ ಲಕ್ಷಣ ಇದಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಬಂಧನ, ಬಿಡುಗಡೆ ಪ್ರಹಸನದ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ವಿಚಾರದಲ್ಲಿ ಪೊಲೀಸರನ್ನು ಛೂ ಬಿಡುವ ಕೆಲಸ ಮಾಡಿಸಲಾಗಿದ್ದು, ರಾಜ್ಯದಲ್ಲಿ ಗೂಂಡಾ ರಾಜ್ಯ ಬಂದಿದೆ ಅಥವಾ ಬರುವ ಸೂಚನೆ ಇದೆ. ರಾಜ್ಯದಲ್ಲಿ ತಾಲಿಬಾನಿ ಸರ್ಕಾರ ಬಂದಿದೆ, ಇದು ಅದರ ಲಕ್ಷಣವಾಗಿದೆ.

ಈ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಈ ರೀತಿ ಇತ್ತು. ಆದರೆ ಇದೀಗ ಆ ರಾಜ್ಯಗಳು ಬದಲಾಗಿದ್ದು, ನಾವು ಅವರಂತೆ ಆಗಿದ್ದೇವೆ. ನೆರೆಯ ತಮಿಳುನಾಡಿನಲ್ಲಿ ಜಯಲಲಿತಾ, ಕರುಣಾನಿಧಿ ನಡುವೆ ನಡೆದಂತೆ ನಮ್ಮ ರಾಜ್ಯದಲ್ಲೂ ನಡೆದರೆ ನಮ್ಮ ರಾಜ್ಯಕ್ಕೆ ಗೌರವ ಬರುತ್ತದೆಯಾ ಎಂದು ಪ್ರಶ್ನಿಸಿದರು.

ಈ ಹಿಂದೆ ಹುಣಸೂರು ಹನುಮ ಜಯಂತಿ ವೇಳೆ ನನಗೂ ಇದೇ ರೀತಿಯ ಅನುಭವ ಆಗಿತ್ತು. ಮಾತಿನ ಭರಾಟೆಯಲ್ಲಿ ಜನಪ್ರತಿನಿಧಿಗಳು ಬಹಳಷ್ಟು ಬಾರಿ ಸಭ್ಯತೆಯ ಎಲ್ಲೆ ಮೀರುತ್ತಾರೆ. ಅಲ್ಲದೇ ಇಡೀ ಸದನ ಸಭಾಧ್ಯಕ್ಷರ ಸುಪರ್ದಿಯಲ್ಲಿರುತ್ತದೆ. ಆದರೆ, ಅಲ್ಲಿಗೆ ಪೊಲೀಸರು ಹೇಗೆ ಬಂದರು? ವಿಧಾನಸೌಧದಲ್ಲಿ ಕಾಂಗ್ರೆಸ್ ಅವರು ಪಾಕಿಸ್ತಾನ್ ಜಿಂದಾಬಾದ್ ಎಂದಾಗ, ಇದೇ ಲಕ್ಷ್ಮಿಹೆಬ್ಬಾಳ್ಕರ್ ಅದು ಪಾಕಿಸ್ತಾನ್ ಜಿಂದಾಬಾದ್ ಅಲ್ಲ, ನಜೀರ್ ಸಾಬ್ ಜಿಂದಾಬಾದ್ ಎಂದು ಘೋಷಿಸಿದ್ದರು.

ಆದರೆ, ಫೊರೆನ್ಸಿಕ್ ವರದಿ ಬಂದ ಬಳಿಕ ಇದೇ ಲಕ್ಷ್ಮಿ ಹೆಬ್ಬಾಳ್ಕರ್ ಸುಮ್ಮನೆ ಆಗಲಿಲ್ವಾ?. ಅದೇ ರೀತಿಯಲ್ಲಿ ಈ ವಿಚಾರದಲ್ಲೂ ಫೋರೆನ್ಸಿಕ್ ರೀಪೋರ್ಟ್ ಬರಲಿ. ಯಾರದು ತಪ್ಪು ಎಂಬುದು ಗೊತ್ತಾಗಲಿ, ನಂತರ ಸೂಕ್ತ ಕ್ರಮ ಆಗಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಂಬೇಡ್ಕರ್ ಅವರನ್ನು ಕೇವಲ ಪಾಠಕ್ಕೆ ಸೀಮಿತ ಮಾಡಲಾಗಿದ್ದು, ಅಂಬೇಡ್ಕರ್ ಬಗ್ಗೆ ಕ್ಲೈಮ್ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಯಾವುದೇ ನೈತಿಕ ಹಕ್ಕಿಲ್ಲ. ಕಾಂಗ್ರೆಸ್ ನಾಯಕರು ಯಾವ ಮುಖ ಹೊತ್ತು ಮಾತನಾಡುತ್ತಾರೋ ಗೊತ್ತಿಲ್ಲ. ಅಂಬೇಡ್ಕರ್ ಕಾನೂನು ಸಚಿವರಾಗಿದ್ದಾಗ ನೊಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಿದ್ದು ಕಾಂಗ್ರೆಸ್. ಚುನಾವಣೆಗಳಲ್ಲಿ ಅವರನ್ನು ಸೋಲಿಸಿ ಅವಮಾನ ಮಾಡಿದ್ದು ಕೂಡ ಕಾಂಗ್ರೆಸ್ ಎಂದರು.

ಅಲ್ಲದೇ ಅಂಬೇಡ್ಕರ್ ಸತ್ತಾಗ ಜಾಗ ನೀಡದ ಕಾಂಗ್ರೆಸ್, ಅಂಬೇಡ್ಕರ್‌ಗೆ ಸಂಬಂಧಿಸಿದ ಯಾವುದೇ ಸ್ಥಳದ ರಕ್ಷಣೆ ಮಾಡಲಿಲ್ಲ. ಬದಲಿಗೆ ಅವರ ಸಂವಿಧಾನ ಅಮಾನತ್ತಿನಲ್ಲಿಟ್ಟವರು ಸಹ ಕಾಂಗ್ರೆಸ್ಸಿಗರೇ ಆಗಿದ್ದಾರೆ. ಹೀಗಿರುವಾಗ ಯಾವ ಮುಖ ಹೊತ್ತು ಈ ರೀತಿ ಮಾತನಾಡುತ್ತೀರಾ ಎಂದು ಪ್ರಶ್ನೆ ಮಾಡಿದ ಪ್ರತಾಪ್ ಸಿಂಹ, ಇಲ್ಲಿವರೆಗೆ ವಕ್ಫ್ ಇಟ್ಕೊಂಡು ಮುಸ್ಲಿಂ ಓಲೈಕೆ ಮಾಡುತ್ತಿದ್ದ ಕಾಂಗ್ರೆಸ್ ನಾಯಕರುಗಳು ಇದೀಗ ಅಂಬೇಡ್ಕರ್ ಪೋಟೋ ಹಿಡಿದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.