ಮೈಸೂರು: ಸುಳವಾಡಿ ವಿಷ ಪ್ರಸಾದ ದುರಂತ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. 7 ವರ್ಷ ಕಳೆದರೂ ನೆಮ್ಮದಿ ಸಿಕ್ಕಿಲ್ಲ. ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದರು. ಏಳನೇ ವರ್ಷ ಪುಣ್ಯ ಸ್ಮರಣೆಯಂದು ಮೃತರ ಸಮಾಧಿ ಬಳಿ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಹನೂರು ತಾಲೂಕು ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ಪ್ರಸಾದ ದುರಂತ ಸಂಭವಿಸಿತ್ತು. ದೇವಸ್ಥಾನದಲ್ಲಿ 2018ರ ಡಿಸೆಂಬರ್ 14 ರಂದು ಘಟನೆ ನಡೆದಿತ್ತು. ವಿಷ ಪ್ರಸಾದ ದುರಂತಕ್ಕೆ 7 ವರ್ಷಗಳು ಆಗಿದೆ. ಹೊಸ ಗೋಪುರ ನಿರ್ಮಾಣ ಕಾರ್ಯಕ್ರಮದಲ್ಲಿ ತಯಾರಿಸಿದ್ದ ಪ್ರಸಾದದಲ್ಲಿ ಪಾಪಿಗಳು ವಿಷ ಬೆರಸಿದ್ದರು.

ವಿಷ ಪ್ರಸಾದ ತಿಂದು 17 ಮಂದಿ ಸಾವನ್ನಪ್ಪಿದ್ದರು. ಇಮ್ಮಡಿ ಮಹದೇವಸ್ವಾಮಿ ಮತ್ತು ಆತನ ಸಹಚರರು ವಿಷ ಬೆರೆಸಿದ್ದರಿಂದ 17 ಜನರು ಸಾವನ್ನಪ್ಪಿದ್ದರು. ಬಿದರಹಳ್ಳಿ, ದೊಡ್ಡಾಣೆ, ಸುಳವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಮತ್ತು ಓಂಶಕ್ತಿ ಮಾಲಾಧಾರಿಗಳು ಈ ದುರಂತಕ್ಕೆ ಬಲಿಯಾಗಿದ್ದರು.
ದುರಂತ ನಡೆದು ಏಳು ವರ್ಷಗಳೇ ಕಳೆದರೂ, ಸಂತ್ರಸ್ತರ ಕುಟುಂಬಗಳಿಗೆ ಸಿಕ್ಕಿಲ್ಲ ಪರಿಹಾರ. ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸ್ಥಳೀಯರು ಮತ್ತು ಸಂತ್ರಸ್ತ ಕುಟುಂಬಗಳ ಅಳಲು ತೋಡಿಕೊಂಡಿದ್ದಾರೆ. ಈ ದುರ್ಘಟನೆ ಸುಳವಾಡಿ ಗ್ರಾಮಸ್ಥರ ನೆಮ್ಮದಿಯನ್ನು ಕಸಿದಿದೆ. ನ್ಯಾಯ ಮತ್ತು ಪರಿಹಾರಕ್ಕಾಗಿ ಹೋರಾಟ ಮುಂದುವರೆದಿದೆ.

