ಮೈಸೂರು: ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಆರ್.ಎಸ್.ಎಸ್ ಸಂಘ ಪರಿವಾರದವರು ಶುದ್ಧೀಕರಿಸಿ ಅಸ್ಪೃಶ್ಯತೆ ಆಚರಿಸಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಮಿತಿ ಮೈಸೂರು ಜಿಲ್ಲಾ ಘಟಕವು ಮೈಸೂರಿನಲ್ಲಿ ಪತ್ರಿಭಟನೆ ನಡೆಸಲಾಯಿತು.

ಮೈಸೂರಿನ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ನೇತೃತ್ವದಲ್ಲಿ ಜಮಾಯಿಸಿದ ಪದಾಧಿಕಾರಿಗಳು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ಮಾತನಾಡಿ, ಉತ್ತರಾಖಂಡದ ಹಲ್ದಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಖರ್ಗೆ ಅವರು ಭಾಷಣ ಮಾಡಿದ್ದರು. ಖರ್ಗೆ ಅಸ್ಪೃಶ್ಯರೆಂದು ತಿಳಿದು, ಆ ಸ್ಥಳ ಅಪವಿತ್ರವಾಗಿದೆ ಎಂದು ಶುದ್ಧೀಕರಣ ಮಾಡಿರುವುದು ಖಂಡನೀಯ.

ಹೋಮ-ಹವನ, ಯಜ್ಞಗಳನ್ನು ಮಾಡಿ ಗಂಗಾಜಲ, ಗೋಮೂತ್ರದಿಂದ ತೊಳೆದು ಶುದ್ಧೀಕರಿಸಿರುವುದು ಮೂಢನಂಬಿಕೆಯ ಭಾಗ ಮತ್ತು ಒಂದು ಸಮುದಾಯದ ಜನಪ್ರತಿನಿಧಿಯನ್ನು ಜಾತಿ ಆಧಾರಿತವಾಗಿ ನಡೆಸಿದ ಅಸ್ಪೃಶ್ಯತೆಯ ಆಚರಣೆಯಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ. ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಮತ್ತು ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆ ಭಾರತದ ತಲೆ ತಗ್ಗಿಸುವಂತಾಗಿದೆ.

ಕೇಂದ್ರ ಸರ್ಕಾರ ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಘಟನೆಯ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ತನಿಖೆ ನಡೆಸಬೇಕು. ಘಟನೆಗೆ ಸಂಬಂಧಿಸಿದ ಕಾರ್ಯಕರ್ತರನ್ನು ಅಸ್ಪೃಶ್ಯತೆ ಆಚರಣೆ ಕಾಯ್ದೆ ಅಡಿ ಬಂಧಿಸಬೇಕು. ಈ ಘಟನೆಗೆ ಸಂಬಂಧಿಸಿದವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು. ಇಂತಹ ಘಟನೆಗಳನ್ನು ದೇಶದಲ್ಲಿ ಮರುಕಳಿಸದಂತೆ ಸಂಸತ್ ನಲ್ಲಿ ಕಠಿಣ ಕ್ರಮವಾಗುವಂತೆ ಕಾನೂನು ಜಾರಿಗೊಳಿಸಬೇಕು. ಈ ಕೃತ್ಯವೆಸಗಿದವರ ಮೇಲೆ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಅಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಸಮಿತಿ ಸದಸ್ಯ ಶಿವಣ್ಣ, ಜಿಲ್ಲಾ ಸಂಯೋಜಕ ಗೋವಿಂದ, ಜಿಲ್ಲಾ ಖಜಾಂಚಿ ದೇವರಾಜ್, ಸಂಯೋಜಕರಾದ ಅಣ್ಣಯ್ಯ ಸ್ವಾಮಿ, ಕುಮಾರ್, ಕೃಷ್ಣಮೂರ್ತಿ, ಚಲುವರಾಜು, ಜಯಕುಮಾರ್, ಮಂಜು, ಮಂಜುನಾಥ್, ಪುಟ್ಟಸ್ವಾಮಿ, ಮಹದೇವು, ಮಾಧವ್, ಶಿವರಾಜ್, ಮಹೇಶ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.