ನಂಜನಗೂಡು: ನಂಜನಗೂಡಿನಲ್ಲಿ ತೋಟಗಾರಿಕೆ ಇಲಾಖೆಯ ನೂತನ ಹಿರಿಯ ಸಹಾಯಕ ನಿರ್ದೇಶಕರ ಕಛೇರಿಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ನೂತನ ಕಛೇರಿಯನ್ನು ಉದ್ಘಾಟಿಸಿ ಒಳಗಡೆ ತೆರಳಿದ ಶಾಸಕರು, ಶೌಚಾಲಯವನ್ನು ವೀಕ್ಷಿಸಿದರು. ಈ ವೇಳೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಶೌಚಾಲಯವನ್ನು ನಿರ್ಮಿಸಿರುವುದು ಬೆಳಕಿಗೆ ಬಂದಿದೆ. ಉದ್ಘಾಟನೆ ದಿನವೇ ಕಿತ್ತು ಬರುತ್ತಿರುವ ಪೈಪ್, ಸಿಂಕ್ ಕಂಡು ಲ್ಯಾಂಡ್ ಆರ್ಮಿ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಸ್ಥಳದಲ್ಲೇ ಇದ್ದ ಅಧಿಕಾರಿಗಳನ್ನು ಶಾಸಕ ದರ್ಶನ್ ಧ್ರುವ ನಾರಾಯಣ್ ರವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇಂದು ಸಂಜೆಯ ಒಳಗಡೆ ಗುಣಮಟ್ಟದ ವಸ್ತುಗಳನ್ನು ಅಳವಡಿಸಿ, ನನಗೆ ಫೋಟೋ ಕಳುಹಿಸಬೇಕು ಎಂದು ತಾಕೀತು ಮಾಡಿದರು.

ಸುಮಾರು 71.51 ಲಕ್ಷ ರೂ. ವೆಚ್ಚದಲ್ಲಿ ನಂಜನಗೂಡಿನಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ನಿರ್ಮಾಣ ಮಾಡಲಾಗಿದೆ. ಕಳೆದ ಆರು ವರ್ಷಗಳಿಂದ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದ್ದು, ಲಕ್ಷಾಂತರ ಹಣವನ್ನು ಖರ್ಚು ಮಾಡಿ ಕಟ್ಟಡ ನಿರ್ಮಿಸಿದ್ದರೂ ಕಳಪೆ ವಸ್ತುಗಳನ್ನು ಅಧಿಕಾರಿಗಳು ಅಳವಡಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡು, ಕಳಪೆ ಗುಣಮಟ್ಟದ ವಸ್ತುಗಳನ್ನು ಹಾಕಿ ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೇ ಕಾದು ನೋಡಬೇಕಿದೆ.