ಮೈಸೂರು: ಮೃತಪಟ್ಟ ತಂದೆಯ ಮರಣ ಪ್ರಮಾಣ ಪತ್ರವನ್ನು ಕೇಳಿದ ಮಗನಿಗೂ ಮರಣ ಪತ್ರವನ್ನು ನೀಡಿ, ಮೈಸೂರು ಮಹಾನಗರ ಪಾಲಿಕೆ ಬಾರಿ ಎಡವಟ್ಟು ಮಾಡಿಕೊಂಡಿದೆ.

ಗುಂಡ್ಲುಪೇಟೆ ತಾಲ್ಲೂಕಿನ ವಣಕನಪುರ ಗ್ರಾಮದ ರೈತ ಶಿವಣ್ಣಚಾರಿ ಎಂಬುವವರು 2021 ರಲ್ಲಿ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಮೃತ ವ್ಯಕ್ತಿಯ ಪುತ್ರ ಗುರುಸ್ವಾಮಿ ತನ್ನ ತಂದೆ ಮೃತಪಟ್ಟಿರುವ ಮರಣ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಮೈಸೂರಿನ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಮೃತ ರೈತ ಶಿವಣ್ಣ ಚಾರಿ ರವರ ಮರಣ ಪತ್ರವನ್ನು ನೀಡಿದ್ದಾರೆ. ಅಲ್ಲದೆ ಅರ್ಜಿ ಸಲ್ಲಿಸಿದ ಮಗನಿಗೆ ಮರಣ ಪ್ರಮಾಣ ಪತ್ರವನ್ನು ನೀಡಿರುವುದಲ್ಲದೆ ತನ್ನ ತಾಯಿಯ ಹೆಸರನ್ನು ಹೆಂಡತಿಯೆಂದು ನಮೂದು ಮಾಡಿ ಅಕ್ರಮ ಎಸಗಿದ್ದಾರೆ.

ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರವನ್ನು ನೀಡಿರುವ ಮೈಸೂರು ಮಹಾನಗರ ಪಾಲಿಕೆಯ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ. ಜೀವಂತವಾಗಿರುವ ಗುರುಸ್ವಾಮಿ ಎಂಬ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿರುವ ಪರಿಣಾಮವಾಗಿ ಆತನಿಗೆ ಕಳೆದ ನಾಲ್ಕು ವರ್ಷಗಳಿಂದ ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ.

ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯಲ್ಲಿಯು ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬದುಕಿದ ವ್ಯಕ್ತಿಯನ್ನು ಸಾಯಿಸಿದ, ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಮೃತಪಟ್ಟಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರವನ್ನು ನೀಡಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಆಗ್ರಹಿಸಿದ್ದಾರೆ.

-ಸಿ‌.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು.