ಮೈಸೂರು: ಇದು ಹೊಳೆಯಲ್ಲ ರಸ್ತೆ ಅಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ. ಹುಣಸೂರು ತಾಲೂಕಿನ ಹನಗೋಡಿನ ಸುತ್ತಮುತ್ತ ಸುರಿದ ಭಾರಿ ಮಳೆಗೆ ಸಿಂಡೇನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಕೆಸರು ನೀರು ನಿಂತು ಹೊಳೆಯಂತಾಗಿದೆ. ಇದರಿಂದ ಗ್ರಾಮಸ್ಥರು ಓಡಾಡಲು ಸಾಧ್ಯವಾಗದೆ ಪರದಾಡುವಂತಾಗಿದೆ.

ಈಗಾಗಲೇ ಗ್ರಾಮದಲ್ಲಿ ಚರಂಡಿ ಹಾಗೂ ಸ್ವಚ್ಛತೆ ಇಲ್ಲದೆ ನವಗ್ರಾಮ ರಸ್ತೆ ಗಬ್ಬೆದ್ದು ನಾರುತ್ತಿದ್ದು ಸಾಂಕ್ರಾ ಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಇದರ ನಡುವೆ ಚರಂಡಿಗಳಲ್ಲಿ ನೀರು ಹರಿಯದೆ ರಸ್ತೆ ಮೇಲೆಯೇ ನಿಲ್ಲುತ್ತಿದ್ದು, ಚರಂಡಿಗಳಲ್ಲಿ ತ್ಯಾಜ್ಯ ನೀರು ಹರಿಯದೆ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು ಗ್ರಾಮದ ಜನರು ಭಯಭೀತರನ್ನಾಗಿಸಿದೆ.

ಗ್ರಾಮದ ಮುಖ್ಯ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಯು ಇಲ್ಲದೆ ಬಿದ್ದ ಮಳೆಯ ನೀರು ಹರಿಯದೆ ರಸ್ತೆಯಲ್ಲಿ ನಿಂತಿದ್ದು ಮಕ್ಕಳು ಪ್ರತಿನಿತ್ಯ ಈ ರಸ್ತೆಯ ಮೂಲಕ ಶಾಲೆಗೆ ಹೋಗಬೇಕಾಗಿದ್ದು ಗದ್ದೆಯಂತೆ ಆಗಿದ್ದು ಶಾಲೆಗೆ ಹೋಗಲು ಹಿಂದೇಟು ಹಾಕುತಿದ್ದಾರೆ. ಗ್ರಾಮಸ್ಥರು ಈ ರಸ್ತೆಯಲ್ಲಿ ನಿತ್ಯ ಕೆಲಸಕ್ಕೆ ತಿರುಗಾಡಲು ಸಾಧ್ಯವಾಗದೆ ನರಕ ಯಾತನೆ ಅನುಭವಿಸುವಂತಾಗಿದೆ.

ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳ ಮತ್ತು ಜನಪ್ರತಿನಿಧಿನಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ. ಕನಿಷ್ಠ ಪಕ್ಷ ನರೇಗಾ ಯೋಜನೆಯಲ್ಲಿ ಮೆಟ್ಲಿಂಗ್ ರಸ್ತೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕ್ರಮವಹಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.