ನಂಜನಗೂಡು: ನಂಜನಗೂಡಿನ ಸಮೀಪದ ಕಪಿಲಾ ನದಿ ತಟದಲ್ಲಿರುವ ಶ್ರೀ ಗುರುಕಂಬಳೀಶ್ವರ ಮಲ್ಲನಮೂಲೆ ಮಠದ ಐದನೇ ಪೀಠಾಧಿಪತಿಗಳಾದ ಶ್ರೀನಿ.ಪ್ರ.ಸ್ವ.ಶ್ರೀ ಚನ್ನಬಸವ ಮಹಾಸ್ವಾಮಿಜಿಗಳು (84) ಅನಾರೋಗ್ಯದಿಂದ ಸೋಮವಾರ ರಾತ್ರಿ ಶಿವೈಕ್ಯರಾಧರು.

ಸೋಮವಾರ ರಾತ್ರಿ 10 ಗಂಟೆಯಿಂದ ಮಂಗಳವಾರ ಮಧ್ಯಾಹ್ನ 2.30ರವರೆಗೆ ಭಕ್ತಾದಿಗಳ ಅಂತಿಮ ದರ್ಶನಕ್ಕೆ ಮಠದ ಆವರಣದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಶ್ರೀ ಚನ್ನಬಸವ ಮಹಾಸ್ವಾಮಿಜಿಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನದ ವರೆಗೆ ಸರತಿ ಸಾಲಿನಲ್ಲಿ ನಿಂತು ಲಕ್ಷಾಂತರ ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು.

ಸುತ್ತೂರು ಶ್ರೀಗಳಾದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾ ಸ್ವಾಮೀಜಿಗಳು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಂಸದ ಸುನಿಲ್ ಬೋಸ್, ಯದು ವೀರ್ ಕೃಷ್ಣ ದತ್ತ ಒಡೆಯರ್, ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ ದರ್ಶನ್ ಧ್ರುವ ನಾರಾಯಣ್, ಗಣೇಶ್ ಪ್ರಸಾದ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲ್ಲೂಕು ವೀರಶೈವ ಘಟಕದ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಎಸ್.ಮಹದೇವಯ್ಯ, ಕುಂಬ್ರಹಳ್ಳಿ ಸುಬ್ಬಣ್ಣ, ಕಾ.ಪು ಸಿದ್ದವೀರಪ್ಪ, ಬಿ.ಎನ್ ಸದಾನಂದ, ಕುರಹಟ್ಟಿ ಮಹೇಶ್ ಸೇರಿದಂತೆ ಸೇರಿದಂತೆ ಹಲವಾರು ಜನ ಪ್ರತಿನಿಧಿಗಳು ಅಂತಿಮ ದರ್ಶನ ಪಡೆದರು.

ಲಕ್ಷಾಂತರ ಭಕ್ತರ ಭೇಟಿ: ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರು ಚಾಮರಾಜನಗರ ಟಿ.ನರಸೀಪುರ ಗುಂಡ್ಲುಪೇಟೆ ನಂಜನಗೂಡು ತಾಲ್ಲೂಕಿನ ಬಹುತೇಕ ಗ್ರಾಮಗಳ ಅಪಾರಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದ ಹಿನ್ನೆಲೆ ಕಿಲೋಮೀಟರ್ ಗಟ್ಟಲೇ ಸರತಿ ಸಾಲು ಕಂಡುಬಂದಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀಮಠ ಇರುವ ಹಿನ್ನೆಲೆ ಸಂಚಾರ ದಟ್ಟಣೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಮೈಸೂರು ಎಸ್.ಪಿ ವಿಷ್ಣುವರ್ಧನ್, ಡಿ ವೈಎಸ್ ಪಿ ರಘು, ಸಂಚಾರ ಠಾಣೆಯ ಕೃಷ್ಣಕಾಂತ ಕೋಳಿ ಸೇರಿದಂತೆ ಜಿಲ್ಲೆಯ ಪಿಎಸ್ಐ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು ಶ್ರೀಗಳ ಅಂತ್ಯಕ್ರಿಯೆಗೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.

ಶ್ರೀಗಳ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಗೆ ಮಠದ ವತಿಯಿಂದ ಬಹಳ ಅಚ್ಚುಕಟ್ಟಾಗಿ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.  ಮಲ್ಲನ ಮೂಲೆ ಮಠದ ಪಕ್ಕದ ಗ್ರಾಮವಾದ ಬಸವನಪುರ ಗ್ರಾಮದಲ್ಲಿ ಶ್ರೀಗಳ ಪಾರ್ಥಿವ  ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ತದನಂತರ ಶ್ರೀ ಮಠಕ್ಕೆ ತರಲಾಯಿತು.

ಶ್ರೀ ಮಠದ ಹಿಂದಿನ ನಾಲ್ಕು ಮಠಾಧಿಪತಿಗಳನ್ನು ನಿಕ್ಷೇಪಗೊಳಿಸಿರುವ ಸ್ಥಳದಲ್ಲಿ ಚೆನ್ನಬಸವ ಸ್ವಾಮೀಜಿಗಳ ಪಾರ್ಥಿವ ಶರೀರವನ್ನು ಸುತ್ತೂರು ಶ್ರೀಗಳ ಸಮ್ಮುಖದಲ್ಲಿ ಹಾಗೂ ಮಠದ ಕಿರಿಯ ಶ್ರೀಗಳಾದ ಶ್ರೀ ಇಮ್ಮಡಿ ದೇಶ ಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಿಕ್ಷೇಪ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ಚಾಮರಾಜನಗರ ಸೇರಿದಂತೆ ರಾಜ್ಯದ ಹಲವು ಮಠಗಳ 60 ಕ್ಕೂ ಹೆಚ್ಚು  ಮಠಾಧಿಪತಿಗಳು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು.