ನಂಜನಗೂಡು: ನಂಜನಗೂಡು ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬ್ರಿಟಿಷರ ಕಪಿಮುಷ್ಠಿಯಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಸಾಕಷ್ಟು ತ್ಯಾಗ ಬಲಿದಾನಗಳು ನಡೆದಿವೆ. ಸ್ವತಂತ್ರ ಭಾರತದಲ್ಲಿ ಸಂವಿಧಾನದ ಪಾತ್ರ ಮಹತ್ವವಾಗಿದೆ. ದೇಶದಲ್ಲಿ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತ ದೇಶದ ಪ್ರಜೆಯು ಗೌರವ ಯುತ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದು ತಹಶೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಗಳಾದ ಶಿವಕುಮಾರ್ ಕಾಸ್ನೂರ್ ಹೇಳಿದರು.
ನಂಜನಗೂಡಿನ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರ ಅಧ್ಯಕ್ಷತೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಮತ್ತು ಸರ್ಕಾರಿ, ಖಾಸಗಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಪಥ ಸಂಚಲನ ಮೂಲಕ ಗಮನ ಸೆಳೆದರು. ನಂಜನಗೂಡು ಪೊಲೀಸರು ಪೆರೇಡ್ ನಡೆಸಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನೃತ್ಯ ಸೇರಿದಂತೆ ವಿವಿಧ ಬಗೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಮನ ಸೆಳೆದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ದರ್ಶನ್ ಧ್ರುವ ನಾರಾಯಣ್, ಆಗಸ್ಟ್ 15 1947ರಲ್ಲಿ ಭಾರತ ದೇಶದ ಸಾಕಷ್ಟು ಮಹನೀಯರ ಹೋರಾಟದ ಫಲವಾಗಿ ಬ್ರಿಟಿಷರನ್ನು ದೇಶದಿಂದ ತೊಲಗಿಸುವ ಮೂಲಕ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಬೆಳೆಯುವ ಯುವ ಪೀಳಿಗೆಗೆ ತಂದೆ ತಾಯಿಯಾದವರು ಇತಿಹಾಸವನ್ನು ತಿಳಿಸಿ ಸ್ಮರಿಸಬೇಕು.
ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರತಿಯೊಬ್ಬ ಪ್ರಜೆ ಸ್ವಾತಂತ್ರ್ಯವಾಗಿ ಬದುಕಿ ಶಾಂತಿ ಸೌಹದ್ರತೆಯಿಂದ ಮಾದರಿಯಾಗಿ ಬದುಕಬೇಕು. ಸ್ವತಂತ್ರ ಭಾರತದಲ್ಲಿ ಸಂವಿಧಾನದ ಪಾತ್ರ ಬಹಳ ಪ್ರಮುಖವಾದದ್ದು. ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರು ಭಾರತ ದೇಶಕ್ಕೆ ಸಂವಿಧಾನವನ್ನು ನೀಡಿದ ಫಲವಾಗಿ ನಾವೆಲ್ಲ ಪ್ರಭುದ್ಧತೆಯಿಂದ ಬದುಕಲು ಸಾಧ್ಯವಾಯಿತು. ಇಂದು ನಾನೊಬ್ಬ ಶಾಸಕನಾಗಿ ಇಲ್ಲಿ ನಿಂತು ಮಾತನಾಡುತ್ತೇನೆ ಎಂದರೆ ಅದಕ್ಕೆ ಡಾ. ಅಂಬೇಡ್ಕರ್ ರವರು ಬರೆದಿರುವ ಸಂವಿಧಾನವೇ ಕಾರಣ.
ದೇಶದ ಮಣ್ಣಿನಲ್ಲಿ ಬದುಕುವ ಪ್ರತಿಯೊಂದು ಜೀವಿಗೂ ಸುಲಲಿತವಾಗಿ ಬದುಕಲು ಅವಕಾಶ ಮಾಡಿಕೊಟ್ಟವರು ಸಂವಿಧಾನದ ಪಿತಾಮಹ ಡಾ. ಬಿಆರ್ ಅಂಬೇಡ್ಕರ್ ಹಾಗಾಗಿ ಪ್ರತಿಯೊಬ್ಬರೂ ಕೂಡ ಸಂವಿಧಾನ ಬದ್ಧವಾಗಿ ಬದುಕಬೇಕು ಸುತ್ತಮುತ್ತ ವಾಸಿಸುವ ಯುವ ಪೀಳಿಗೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಿ ಉತ್ತಮ ಪ್ರಜೆಯನಾಗಿ ರೂಪಿಸಬೇಕು ಎಂದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ದರ್ಶನ್ ಧ್ರುವನಾರಾಯಣ್ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಗ್ಯಾರೆಂಟಿ ಅನುಷ್ಠಾನ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಕೆ.ಮಾರುತಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು , ಡಿವೈಎಸ್ಪಿ ರಘು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಪೌರಾಯುಕ್ತ ವಿಜಯ್, ನಗರ ಸಭ ಅಧ್ಯಕ್ಷ ಶ್ರೀಕಂಠಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭವ್ಯ ಶ್ರೀ, ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

