ನಂಜನಗೂಡು: ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ದಕ್ಷಿಣಕಾಶಿ ನಂಜನಗೂಡಿನಲ್ಲಿ ಐತಿಹಾಸಿಕ ಗೌತಮ ಪಂಚಮಹಾ ರಥೋತ್ಸವದ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ಕಪಿಲಾ ನದಿಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ತೆಪ್ಪೋತ್ಸವವು ಶುಕ್ರವಾರ ರಾತ್ರಿ 7 ಗಂಟೆಯಲ್ಲಿ ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ನೆರವೇರಿತು.

ವಜ್ರಾಭರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ವಿಶೇಷವಾಗಿ ಅಲಂಕೃತಗೊಂಡ ಶ್ರೀ ಪಾರ್ವತಿ ಸಮೇತವಾದ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದಿಂದ ತಂದು ಕಪಿಲಾ ನದಿಯ ಸ್ಥಾನಘಟ್ಟದ ಬಳಿ ಇರುವ ಮಂಟಪದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅಲ್ಲಿಂದ ಮಂಗಳ ವಾದ್ಯಗಳೊಂದಿಗೆ ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದ ತೇಲುವ ದೇವಾಲಯದ ಮಾದರಿಯಲ್ಲಿದ್ದ ಯಾಂತ್ರಿಕ ದೋಣಿಯಲ್ಲಿ ಕೂರಿಸಿ ಅದ್ದೂರಿಯಾಗಿ ತೆಪ್ಪೋತ್ಸವ ನಡೆಸಲಾಯಿತು.

ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ಶ್ರೀ ನಂಜುಂಡೇಶ್ವರನ ತೆಪ್ಪೋತ್ಸವವು ಕಪಿಲಾ ನದಿಯಲ್ಲಿ ಪೂರ್ವ ಪಶ್ಚಿಮಾಭಿಮುಖವಾಗಿ ಮೂರು ಬಾರಿ ಪ್ರದಕ್ಷಿಣೆ ಹಾಕಿತು. ಈ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳುವ ಮೂಲಕ ಭಕ್ತರು ತಮ್ಮ ಭಕ್ತಿ ಭಾವ ಮೆರೆದರು. ಇದೇ ಸಂದರ್ಭದಲ್ಲಿ ಕಪಿಲಾ ನದಿಯ ಮತ್ತೊಂದು ದಡದಲ್ಲಿ ಹೆಜ್ಜಿಗೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜಮಾಯಿಸಿ ಚಿತ್ತಾಕರ್ಷಕವಾದ ಬಾಣ ಬಿರುಸು ಪಟಾಕಿಗಳನ್ನು ಸಿಡಿಸುವ ಮೂಲಕ ಸಂಭ್ರಮಿಸಿದರು.

ತೆಪ್ಪೋತ್ಸವ ಮುಗಿದ ಬಳಿಕ ಉತ್ಸವ ಮೂರ್ತಿಗಳನ್ನು ತಂದು ನಂಜನಗೂಡು ಪಟ್ಟಣದ ರಥ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಪಿಲಾ ನದಿ ತೀರ ಸೇರಿದಂತೆ ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶ್ರೀ ನಂಜುಂಡೇಶ್ವರನ ತೆಪ್ಪೋತ್ಸವವನ್ನು ಕಣ್ತುಂಬಿಕೊಳ್ಳಲು ನಂಜನಗೂಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರ ಮಹಾಪೂರವೇ ಹರಿದು ಬಂದಿತ್ತು.