ನಂಜನಗೂಡು: ಸರ್ಕಾರ ರೈತರ ಭೂಮಿಗಳನ್ನು ಬಲವಂತವಾಗಿ ಕಿತ್ತುಕೊಳ್ಳಲಾಗುತ್ತಿದೆ. ಜೊತೆಗೆ ಸಂವಿಧಾನದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತ ಮುಖಂಡ ಹೊನ್ನೂರು ಪ್ರಕಾಶ್ ಹೇಳಿದರು.
ನಂಜನಗೂಡು ನಗರದ ಎಪಿಎಂಸಿ ಆವರಣದಲ್ಲಿರುವ ಪ್ರೊ.ನಂಜುಂಡಸ್ವಾಮಿ ಸಮುದಾಯ ಭವನದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಗೆ ರೈತರ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಂಜನಗೂಡು ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ರೈತ ಸಂಘಟನೆಯನ್ನು ಸಂಘಟಿಸುವ ಅನಿವಾರ್ಯತೆ ಎದುರಾಗಿದೆ.
ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ರೈತ ಸಂಘಟನೆಯು ಬೆಳೆಯುತ್ತಿದೆ. ರಾಜಕೀಯ ಪಕ್ಷಗಳ ಭ್ರಷ್ಟ ರಾಜಕಾರಣಿಗಳು ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ದೇಶದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಬೆಂಬಲ ಬೆಲೆ ಕನಿಷ್ಠ ಬೆಲೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ರೈತರ ವಿರುದ್ಧವಾಗಿ ಕಾನೂನುಗಳನ್ನು ರೂಪಿಸುತ್ತಿದ್ದಾರೆ.
ರೈತರ ಪರವಾಗಿ ಕಾನೂನುಗಳು ಇಲ್ಲ. ನೀನು ನನ್ನ ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡಿ, ವ್ಯವಸಾಯವನ್ನು ಬಿಟ್ಟು ಪಟ್ಟಣದತ್ತ ಹೋಗುತ್ತಿದ್ದಾರೆ. ಭೂಮಿಗಳನ್ನು ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ. ಸಂವಿಧಾನದ ಹಕ್ಕುಗಳನ್ನು ಕಸಿಯುತ್ತಿದ್ದಾರೆ. ನಮ್ಮ ಸಂಸ್ಕೃತಿ, ಭಾಷೆ ಭೂಮಿಯನ್ನು ಉಳಿಸಿಕೊಳ್ಳಬೇಕು. ಮಾನವ ಮತ್ತು ಪ್ರಾಣಿ ಸಂಘರ್ಷ ನಡೆಯುತ್ತಿದೆ. ಕಾಡಿನಲ್ಲಿ ಹುಲಿ ಇದ್ದರೆ ಕಾಡು ಚೆನ್ನಾಗಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಕಾಡುಪ್ರಾಣಿಗಳು ಬರುತ್ತವೆ. ಆಹಾರದ ಕೊರತೆ ಪ್ರಾಣಿಗಳಿಗೆ ಎದುರಾಗಿರಬಹುದು. ಅರಣ್ಯ ಇಲಾಖೆ ಸಚಿವರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವೈಫಲ್ಯವೆ ಕಾರಣ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ವರ್ಷಕ್ಕೆ 35 ಕೋಟಿ ರೂ. ಆದಾಯ ಬರುತ್ತಿದೆ. ಕಾಡಿನಲ್ಲಿ ಮರಗಳ ಕಟಾವು ಸಫಾರಿ ರೆಸಾರ್ಟ್ ಗಳು ತಲೆಯೆತ್ತುತ್ತಿದೆ ಇದರಿಂದ ಪ್ರಾಣಿಗಳು ನಾಡಿನತ್ತ ಬರುತ್ತೇವೆ. ಪ್ರಾಮಾಣಿಕವಾಗಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ರೈತರು ಪ್ರಶ್ನೆ ಮಾಡುತ್ತಿದ್ದಾರೆ. ರೈತ ಸಂಘಟನೆಗಳು ಎಷ್ಟೇ ಹೆಚ್ಚಾದರೂ ಪ್ರಶ್ನಿಸುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು.
ಇನ್ನು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂರಾರು ರೈತರನ್ನು ಹಸಿರು ಶಾಲು ಹೊದಿಸುವ ಮೂಲಕ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ, ಮಂಜು ಕಿರಣ್, ನಳಿನಿ, ಜಿ.ಮಂಜುನಾಥ್ ಶಿರಮಳ್ಳಿ, ಸ್ವಾಮಿ, ಕುಮಾರ್ ಪಾಟೀಲ್, ವೇಣುಗೋಪಾಲ್ ಸಿಂಧುವಳ್ಳಿ, ಕಾರ್ತಿಕ್, ಸತೀಶ್, ರಾಜಪ್ಪ, ರಾಜು, ರಾಜೇಶ್, ವಸಂತಕುಮಾರಿ, ಮಹೇಶ್, ಶಿವಲಿಂಗ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

