ನಂಜನಗೂಡು: ಹೆಣ ಹೊರಕ್ಕೆ ಹಿಂದೆಯಾದರೇನು ಮಂದಾದರೇನು, ಸರ್ಕಾರ ಸತ್ತೋಗಿರೋ ಹೆಣ. ಹಿಂದೆಯಾದರೂ ಹೊರಲಿ, ಮುಂದೆಯಾದರೂ ಹೊರಲಿ, ಡಿಕೆ ಶಿವಕುಮಾರ್ ಆದರೂ ಹೊರಲಿ ಸಿದ್ದರಾಮಯ್ಯಯಾದರೂ ಹೊರಲಿ ಎಂದು ನಂಜನಗೂಡಿನಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಯಾರದ್ದು ಮಾತುಗಳನ್ನು ಕೇಳಿಕೊಂಡು ಚುನಾವಣೆಗಳನ್ನು ಮುಂದೂಡುತ್ತಿದ್ದಾರೆ. ಎಂಎಲ್ಎ, ಎಂಪಿ ಅವರನ್ನು ಕೇಳಿಕೊಂಡು ಚುನಾವಣೆ ಮಾಡುವುದಲ್ಲ. ಚುನಾವಣೆ ನಿಯಮದಂತೆ ಚುನಾವಣೆಗಳನ್ನು ನಡೆಸಬೇಕು. ಈ ವಿಚಾರದಲ್ಲಿ ಲಂಚ ತಾಂಡವಾಡುತ್ತಿದೆ. ಈ ರೀತಿ ನಡೆಯಬಾರದು ಚುನಾವಣೆಗಳನ್ನು ಮುಂದೂಡದೆ ನಡೆಸಬೇಕು ಎಂದು ತಹಶೀಲ್ದಾರ್ ಗೆ ಸೂಚಿಸಿದರು.

ಸಿದ್ದರಾಮಯ್ಯಗೆ ರಾಜೀನಾಮೆಗೆ ರೆಡಿಯಾಗುವಂತೆ ಹೈಕಮಾಂಡ್ ಹೇಳಿದೆ. ಸಿದ್ದರಾಮಯ್ಯ ಅವರು ರೆಡಿಯಾಗುತ್ತಿದ್ದಾರೆ ಗೊತ್ತಿಲ್ವಾ ನಿಮಗೆ.. ಸಿದ್ದರಾಮಯ್ಯರವರ ಕಥೆ ಮುಗೀತು. ನಾನು ಹೇಳಿದ್ದು ನಡೆದಿದೆ. ನಾನು ಹೇಳಿದ್ದೆ ಸತ್ಯ ಆಯ್ತು. ನವೆಂಬರ್ ನಲ್ಲಿ ಚೇಂಜ್ ಆಗುತ್ತೆ ಅಂತ ಹೇಳಿದ್ದೆ, ಯಾರನ್ನಾದರೂ ಮಾಡಿಕೊಳ್ಳಲಿ, ಎರಡುವರೆ ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಇಡೀ ಕರ್ನಾಟಕದಲ್ಲಿ ಹಳ್ಳ ಬಿದ್ದ ರಸ್ತೆಗಳನ್ನು ನಾವು ನೋಡ್ತಾ ಇದ್ದೀವಿ. ರೈತರಿಗೆ  ಪರಿಹಾರ ಕೊಡ್ತಾ ಇಲ್ಲ. ಮಂಡ್ಯದಲ್ಲಿ ರೈತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸರ್ಕಾರ ತೊಲಗುವವರೆಗೂ ಜನಸಾಮಾನ್ಯರಿಗೆ ಒಳ್ಳೆಯದು ಆಗುವುದಿಲ್ಲ. ನಮಗೆ ನ್ಯಾಯ ಸಿಗಲಿಲ್ಲ ಎಂದರೆ ನಂಜನಗೂಡು ತಾಲ್ಲೂಕು ಕಛೇರಿಗೆ ಬೀಗ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇನ್ನೂ ಕೊಲೆ, ಸುಲಿಗೆ, ದರೋಡೆ, ನಡೆಯುತ್ತಿದೆ. ನಂಜನಗೂಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರೈತರ ಆತ್ಮಹತ್ಯೆಗಳು ನಡೆಯುತ್ತಿವೆ. 21 ಕೆರೆಗಳನ್ನು ತುಂಬಿಸಬೇಕಿತ್ತು ಕೆರೆಗಳನ್ನು ತುಂಬಿಸಿಲ್ಲ. ನಮ್ಮ ಸರ್ಕಾರ ಇದ್ದಾಗ ಕೆರೆಗಳನ್ನು ತುಂಬಿಸುವ ಕೆಲಸಗಳನ್ನು ಮಾಡಿದ್ದೆವು. ಈ ಸರ್ಕಾರದಲ್ಲಿ ಯಾವುದೇ ಕೆರೆಗಳನ್ನು ತುಂಬಿಸಿಲ್ಲ. ಕಾಡಾನೆಗಳು ಚಿರತೆ ಮತ್ತು ಹುಲಿಗಳ ದಾಳಿ ಆಗುತ್ತಿದೆ. ಪ್ರಾಣಿ ಮತ್ತು ಮಾನವ ಸಂಘರ್ಷ ನಡೆಯುತ್ತಿದೆ. ಇವರತ್ರ ಹಣ ಇಲ್ಲ. ದುಡ್ಡಿಲ್ಲದೆ ಪಾಪರ್ ಆಗಿದ್ದಾರೆ. ಫ್ರೀ ಫ್ರೀ ಅಂದುಕೊಂಡು ಹೆಣ್ಮಕ್ಳನ್ನು ಬಸ್ ಹತ್ತಿಸಿದ್ದಾರೆ ಅಷ್ಟೇ. ಇದನ್ನು ಬಿಟ್ಟರೆ ಬೇರೆ ಏನು ನಡೆದಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಕಸುವಿನಹಳ್ಳಿ, ಹಾಡ್ಯ, ಹೆಡಿಯಾಲ ಸಹಕಾರ ಸಂಘದ ಚುನಾವಣೆಯನ್ನು ಮುಂದೂಡಲಾಗುತ್ತದೆ. ಚುನಾವಣೆಗೆ ನಿಗದಿಯಾಗಿರುವುದನ್ನು ಪೊಲೀಸರು ತಡೆದಿದ್ದಾರೆ. ಚುನಾವಣೆಗಳನ್ನು ನಡೆಸಲೇಬೇಕು. ಸ್ಥಳೀಯ ಚುನಾವಣೆಗಳನ್ನು ಮುಂದೂಡಲಾಗುತ್ತಿದೆ. ಕಾರಣ ಕೇಳಿದರೆ ಪೊಲೀಸರ ಕೊರತೆ ಇದೆ ಎಂದು ಕಾರಣ ನೀಡುತ್ತಿದ್ದಾರೆ. ಪೊಲೀಸರ ಕೊರತೆ ಎದ್ದು ಕಾಣುತ್ತಿದೆ. ನಂಜನಗೂಡಿನಲ್ಲಿ ಕಳ್ಳತನ, ಕೊಲೆ, ಸುಲಿಗೆ ದರೋಡೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಐದು ವರ್ಷ ಶಾಸಕನಾಗಿದ್ದ ಸಂದರ್ಭದಲ್ಲಿ ಯಾವುದೇ ಪ್ರಕರಣಗಳು ನಡೆಯುತ್ತಿರಲಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ದೇವಸ್ಥಾನ ವಿಚಾರದಲ್ಲಿ ಎಂಜಲು ನೀರು ಎರಚಿದ ಪ್ರಕರಣದಲ್ಲಿ ಎಷ್ಟು ಜನರ ಮೇಲೆ ಪ್ರಕರಣವನ್ನು ದಾಖಲು ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಎಲ್.ನಾಗೇಂದ್ರ, ಮಾಜಿ ಶಾಸಕ ಬಿ.ಹರ್ಷವರ್ಧನ್, ಮಾಜಿ ಜಿಪಂ ಸದಸ್ಯ ಚಿಕ್ಕರಂಗನಾಯಕ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಕೆಂಡಗಣ್ಣಪ್ಪ, ಬಿಜೆಪಿ ಪಟ್ಟಣ ಅಧ್ಯಕ್ಷ ಎಸ್.ಸಿದ್ದರಾಜು, ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಬಾಲಚಂದ್ರು, ಪ್ರಧಾನ ಕಾರ್ಯದರ್ಶಿಗಳಾದ ಮಹದೇವಪ್ರಸಾದ್, ರಾಘವೇಂದ್ರ, ಪುಟ್ಟಸ್ವಾಮಿ, ಸಿದ್ದರಾಜು, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಹೊರಳವಾಡಿ ಮಹೇಶ್, ಮಂಜುನಾಥ್, ಹುರಾ ಚಂದ್ರು, ಉಮೇಶ್, ಕೃಷ್ಣಪ್ಪ, ಮಹದೇವಸ್ವಾಮಿ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.