ನಂಜನಗೂಡು: ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ. ಆರ್. ಧ್ರುವನಾರಾಯಣ್ ಅವರ 65ನೇ ವರ್ಷದ ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂಜನಗೂಡು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಉಪ್ಪನಹಳ್ಳಿ ನಾರಾಯಣ್ ಅವರು ಚಾಲನೆ ನೀಡಿದರು. ಕಾಲೇಜು ಆವರಣದಲ್ಲಿ ಹಲವು ಹಣ್ಣು ಮತ್ತು ನೆರಳು ನೀಡುವ ಗಿಡಗಳನ್ನು ವಿದ್ಯಾರ್ಥಿಗಳು ಮತ್ತು ಮುಖಂಡರು ಜಂಟಿಯಾಗಿ ನೆಟ್ಟು ನೀರೆರೆದರು.
ನಂತರ ಕಾಂಗ್ರೆಸ್ ಮುಖಂಡ ಉಪ್ಪನಹಳ್ಳಿ ನಾರಾಯಣ್ ಮಾತನಾಡಿ, ದಿ. ಆರ್. ಧ್ರುವನಾರಾಯಣ್ ಅವರ ಸಾಧನೆಗಳನ್ನು ಸ್ಮರಿಸಿದರು. ಆರ್.ಧ್ರುವನಾರಾಯಣ್ ಅವರು ಶಾಸಕರಾಗಿ, ಸಂಸದರಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರ ಹಾಗೂ ಮೈಸೂರು ಭಾಗದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಕಾಲದಲ್ಲಿ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯದಿಂದ ಸಾಕಷ್ಟು ಅನುದಾನ ಬಂದಿತು. ರಸ್ತೆ, ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಇಂದು ನಾವು ಗಿಡ ನೆಡುವ ಮೂಲಕ ಅವರ ಹುಟ್ಟುಹಬ್ಬ ಆಚರಿಸುತ್ತಿರುವುದು ಪ್ರತೀಕಾತ್ಮಕವಾಗಿದೆ. ಅವರು ಜನರ ಬದುಕಿಗೆ ಹಸಿರು ನೀಡಲು ಶ್ರಮಿಸಿದರು. ನಾವೂ ಅವರ ಆದರ್ಶಗಳನ್ನು ಪಾಲಿಸಿ ಪರಿಸರ ಉಳಿಸುವ ಕೆಲಸ ಮಾಡಬೇಕು. ರಾಜಕಾರಣ ಎಂದರೆ ಕೇವಲ ಭಾಷಣವಲ್ಲ, ಸೇವೆಯೂ ಆಗಬೇಕು ಎಂಬುದನ್ನು ಅವರು ಬದುಕುವ ಮೂಲಕ ತೋರಿಸಿಕೊಟ್ಟರು ಎಂದರು.
ಬಳಿಕ ಕಾಲೇಜಿನ ಪ್ರಾಂಶುಪಾಲರಾದ ಶಿವಣ್ಣ ಮಾತನಾಡಿ, ದಿ.ಆರ್.ಧ್ರುವನಾರಾಯಣ್ ಅವರು ಯಾವಾಗಲೂ ಸಾಮಾಜಿಕ ಮತ್ತು ಪರಿಸರ ಕಾಳಜಿ ಹೊಂದಿದ್ದರು. ಅವರ ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸುವ ಮೂಲಕ ಅವರ ಆಶಯಕ್ಕೆ ಗೌರವ ಸಲ್ಲಿಸಿದಂತಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶಿವಣ್ಣ, ದಸಂಸ ಸಂಚಾಲಕ ಹಗಿನವಾಳು ಚಿಕ್ಕಣ್ಣ, ಉಪನ್ಯಾಸಕರಾದ ಹರೀಶ್, ಡಿ ಗ್ರೂಪ್ ನೌಕರ ಮಂಜು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

