ನಂಜನಗೂಡು: ತಾಲ್ಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆಯನ್ನು ರೂಪಿಸಬೇಕು. ಹಳಿ ತಪ್ಪಿದ ತಾಲ್ಲೂಕು ಆಡಳಿತದ ವಿರುದ್ಧ ರೈತರು ಸಿಡಿದೆದ್ದು, ಬೃಹತ್ ಬಾರುಕೋಲು ಚಳುವಳಿಯನ್ನು ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಂಜನಗೂಡು ತಾಲ್ಲೂಕು ಘಟಕ, ದಲಿತ ಸಂಘಟನೆ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಬಾರುಕೋಲು ಅನಿರ್ಧಿಷ್ಟಾವಧಿ ಚಳುವಳಿಯನ್ನು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್, ಜಿಲ್ಲಾಧ್ಯಕ್ಷ ಸತೀಶ್ ರಾವ್ , ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು ಮತ್ತು ತಾಲ್ಲೂಕು ಅಧ್ಯಕ್ಷ ಸೂರಹಳ್ಳಿ ಮಹದೇವ ನಾಯಕ ನೇತೃತ್ವದಲ್ಲಿ ನಂಜನಗೂಡು ನಗರದ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪಾರ್ಚನೆ ಸಲ್ಲಿಸಿ ಬಾರುಕೋಲು ಚಳುವಳಿಗೆ ಚಾಲನೆ ನೀಡಿದರು.

ನಂಜನಗೂಡಿನ ಎಂ.ಜಿ ರಸ್ತೆ, ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ನಡಿಗೆ ಮೂಲಕ ತಾಲ್ಲೂಕು ಆಡಳಿತ ಭವನದವರೆಗೆ ಬೃಹತ್ ಪಾದಯಾತ್ರೆ ನಡೆಸಿದರು. ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಜಮಾವನೆಗೊಂಡು, ತಾಲ್ಲೂಕು ಆಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎತ್ತಿನಗಾಡಿಗಳು, ಟ್ರ್ಯಾಕ್ಟರ್ ಗಳು ಮತ್ತು ಬೈಕ್ ರ್ಯಾಲಿ ನಡೆಸಿದರು.

ನಂತರ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ಮಾತನಾಡಿ, ತಾಲ್ಲೂಕು ಕಛೇರಿಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಸುಮಾರು 11 ಅಂಶಗಳು ಒಳಗೊಂಡಂತೆ ರೈತರಿಗೆ ಅನುಕೂಲವಾಗಲಿ ಎಂದು ಕಾರ್ಯಕ್ರಮ ರೂಪಿಸಿ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಎಚ್ಚರಿಸುವಂತ ಕೆಲಸ ಮಾಡಿದ್ದೇವೆ. ತಹಶೀಲ್ದಾರ್ ಕಛೇರಿಯಲ್ಲಿ ರೈತರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ, ರೈತರನ್ನು ದಿನನಿತ್ಯ ಅಲೆದಾಡಿಸುತ್ತಿದ್ದಾರೆ. ರೈತರಿಗೆ ಗೌರವ ಕೊಟ್ಟು ಕೆಲಸ ಮಾಡಬೇಕು. ತಾಲ್ಲೂಕಿನಲ್ಲಿ ಐದು ಹೋಬಳಿಗಳಿವೆ. ಕೆಲವೊಂದು ಹೋಬಳಿಗಳಲ್ಲಿ ನೀರಾವರಿ ವ್ಯವಸ್ಥೆ ಇಲ್ಲ, ಬೆಳೆಗಳು ನೀರಿಲ್ಲದೆ ನಾಶವಾಗುತ್ತದೆ. ಹಾಗೂ ಅಂತರ್ಜಲ ಸಂಪೂರ್ಣ ಬತ್ತು ಹೋಗಿದೆ. ಬೆಳೆಗಳಿಗೆ ಪರಿಹಾರ ನೀಡಬೇಕು. ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು.

ರಾಜ್ಯದಲ್ಲಿ ಸುಮಾರು 16 ಜಿಲ್ಲೆಯ ವಿದ್ಯುತ್ ಕೇಂದ್ರಗಳನ್ನು ಖಾಸಗಿ ಮಾಡುತ್ತಿದ್ದಾರೆ. ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು. ರೈತರಿಗೆ ರಸಗೊಬ್ಬರ ವಿತರಿಸಲು ಎಫ್ ಐಡಿ ಮಾಡುತ್ತಿದ್ದಾರೆ ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕೂಡಲೇ ಇದನ್ನು ರದ್ದು ಪಡಿಸಬೇಕು. ದಿನನಿತ್ಯ ಬಳಸುವ ಪೆಟ್ರೋಲ್, ಡೀಸಲ್, ಗ್ಯಾಸ್, ಬೆಲೆ ಏರಿಕೆ ಆಗುತ್ತಿದ್ದು, ಸಾಮಾನ್ಯ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಾದ ಮನೆ ಮನೆಗೆ ಗಂಗೆ ಹಾಗೂ ಉಜ್ವಲ್ ಯೋಜನೆ, ಜನರಿಗೆ ತಲುಪುತ್ತಿಲ್ಲ ರೈತ ವಿರೋಧಿ ಜನರ ವಿರೋಧಿ ಯೋಜನೆಗಳಾಗಿದೆ.

ರೈತರಿಗೆ ಧನಾತ್ಮಕ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರ ನಡೆಸಿದ ನೀಟ್ ಪರೀಕ್ಷೆ ಬರೆದ 27 ಲಕ್ಷ ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುತ್ತಿದೆ. ನಮ್ಮ ಹೋರಾಟದಿಂದ ಸಾಕಷ್ಟು ಅಧಿಕಾರಗಳು ವರ್ಗಾವಣೆಯಾಗಿದ್ದಾರೆ. ತಾಲ್ಲೂಕಿಗೆ ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ರೈತರ ಕೆಲಸಗಳು ಮಾತ್ರ ಆಗುತ್ತಿಲ್ಲ. ನೀರಾವರಿ ಇಲಾಖೆ ಸಂಪೂರ್ಣ ಸತ್ತುಹೋಗಿದೆ. ನೀರಾವರಿ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ರೈತರು ಕೃಷಿ ಭೂಮಿಗೆ ಸಂಬಂಧಿಸಿದಂತೆ ಕೆಲಸ ಕಾರ್ಯ ನಡೆಯಬೇಕಾದರೆ ಲಂಚದ ಹಣ ನೀಡಲೇಬೇಕು. ಇಲ್ಲದಿದ್ದರೆ ಕೆಲಸ ಆಗುವುದಿಲ್ಲ.

ಜಮೀನಿನ ದಾಖಲಾತಿಗಳು, ವಂಶವೃಕ್ಷ, ಜನನ ಮತ್ತು ಮರಣ ದೃಢೀಕರಣ, ಕೃಷಿ ಭೂಮಿಯ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ತಹಶೀಲ್ದಾರ್ ಕಛೇರಿಯಲ್ಲಿ ಲಂಚದ ಹಣ ನೀಡದಿದ್ದರೆ ಕೆಲಸ ನಡೆಯಲ್ಲ ಎಂದು ಆರೋಪಿಸಿದ್ದಾರೆ. ನಂಜನಗೂಡಿಗೆ ನೂತನ ತಹಶೀಲ್ದಾರ್ ಬಂದು ಅಧಿಕಾರ ಪಡೆದು ಆರು ತಿಂಗಳು ಕಳೆದಿದೆ. ರೈತರು ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅವರ ಸಿಬ್ಬಂದಿಗಳು ಮಾಡುವುದಿಲ್ಲ. ಕೂಡಲೇ ನಂಜನಗೂಡಿನ ಎಲ್ಲಾ ಇಲಾಖೆಗಳು ಶುದ್ಧವಾಗಬೇಕು. ರೈತರ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಬೇಕಿದ್ದರೆ ಸಾಕಷ್ಟು ವರ್ಷಗಳಿಂದ ಜಾಂಡ ಹೂಡಿರುವ ಅಧಿಕಾರಿಗಳು ಎತ್ತಂಗಡಿ ಆಗಬೇಕು. ಆರ್ ಐ ಮತ್ತು ವಿಎಗಳು ಹತ್ತಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಿ, ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಭ್ರಷ್ಟ ಮುಕ್ತ, ರೈತ ಸ್ನೇಹಿತ ಆಡಳಿತ ನೀಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ರೈತರು ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಡಾ.ಸ್ಮಿತಾ ರಾಮು ರವರ ಜೊತೆ ರೈತರು ಮಾತುಕತೆ ನಡೆಸಿದರು. ರೈತರ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ. ವಿಳಂಬವಾಗುತ್ತಿವೆ, ನೀವು ಬಂದ ಮೇಲೆ ಎಷ್ಟು ಕೆಲಸ ಮಾಡಿದ್ದೀರಿ ಎಂದು ತಹಶೀಲ್ದಾರ್ ರವರನ್ನು ರೈತರು ತರಾಟೆಗೆ ತೆಗೆದುಕೊಂಡರು.

ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್, ಜನಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಹದೇವ ನಾಯಕ, ಜಿಲ್ಲಾ ಉಪಾಧ್ಯಕ್ಷ ಶಂಕರನಾಯಕ, ಪ್ರಧಾನ ಕಾರ್ಯದರ್ಶಿ ದೇವರಾಜ್, ಪಟ್ಟಣ ಅಧ್ಯಕ್ಷ ಶಿವಣ್ಣ, ಗೌರವಾಧ್ಯಕ್ಷ ಮಾದಪ್ಪ, ಶ್ವೇತಾ , ಮೋಹನ್ ಕುಮಾರ್, ದೊಡ್ಡಯ್ಯ, ರವಿ, ಮಹೇಶ್, ಮಹದೇವಸ್ವಾಮಿ ಸೇರಿದಂತೆ ರೈತ ಮಹಿಳೆಯರು ಮತ್ತು ನೂರಾರು ಸಂಖ್ಯೆಯಲ್ಲಿ ರೈತರು ಹಾಜರಿದ್ದರು.

ಜಾಂಡ ಹೂಡಿರುವ ಅಧಿಕಾರಿಗಳ ಎತ್ತಂಗಡಿ ಯಾವಾಗ..?

ನಂಜನಗೂಡಿನ ವಿವಿಧ ಇಲಾಖೆಗಳಲ್ಲಿ ಐದಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಬೇಕು. ಇವರಿಂದಲೇ ತಾಲ್ಲೂಕು ಆಡಳಿತ ಭವನದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸಾರ್ವಜನಿಕರು ಮತ್ತು ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅರ್ಜಿಗಳು ಮೂಲೆ ಸೇರುತ್ತಿವೆ. ಮಾಜಿ ಸಿಎಂ ಮತ್ತು ಶಾಸಕರಾದ ಸಿದ್ದರಾಮಯ್ಯ ರವರು ಮತ್ತು ದರ್ಶನ್ ಧ್ರುವನಾರಾಯಣ್ ರವರು ರೈತ ಸ್ನೇಹಿ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕೂಡಲೇ ಒಂದೇ ಸ್ಥಳದಲ್ಲಿ ಜಾಂಡ ಹೂಡಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.