ನಂಜನಗೂಡು: ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಾವೆಲ್ಲರೂ ಸುಭದ್ರವಾಗಿ ಇದ್ದೇವೆ ಎಂದರೆ ಅದಕ್ಕೆ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರು ನೀಡಿರುವ ಸಂವಿಧಾನವೇ ಕಾರಣ ಎಂದು ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಅಭಿಪ್ರಾಯಪಟ್ಟರು.

ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಕಾನೂನುಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಅಂಬೇಡ್ಕರ್ ರವರು ಬೇರೆ ಬೇರೆ ದೇಶದ ಸಂವಿಧಾನಗಳನ್ನು ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಬೇಕಾದ ಕಾನೂನುಗಳನ್ನು ಬರೆದಿದ್ದಾರೆ.

ಎಲ್ಲಾ ಕಾನೂನುಗಳು ಸಂವಿಧಾನದ ಚೌಕಟ್ಟಿನಲ್ಲಿ ರೂಪಿತವಾಗಿವೆ. ಸಂವಿಧಾನವು ನಮ್ಮ ಬಹುದೊಡ್ಡ ಗ್ರಂಥವಾಗಿದೆ. ನಾವು ಸುಭದ್ರವಾಗಿ ಇರುವುದಕ್ಕೆ ಸಂವಿಧಾನ ಕಾರಣವಾಗಿದೆ. ಒಂದು ದಿನಕ್ಕೆ ಸಂವಿಧಾನ ದಿನಾಚರಣೆಯನ್ನು ಸೀಮಿತ ಮಾಡದೆ ಪ್ರತಿದಿನ ಆಚರಣೆ ಮಾಡುವಂತಾಗಬೇಕು. ಪ್ರತಿಯೊಬ್ಬರು ಸಂವಿಧಾನ ಬದ್ಧವಾಗಿ ಜೀವನ ಮತ್ತು ಕೆಲಸಗಳನ್ನು ಸಂವಿಧಾನ ಬದ್ಧವಾಗಿಯೇ ಮಾಡಬೇಕು. ಆಗ ಮಾತ್ರ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ನಂತರ ಪತ್ರಕರ್ತ ಸಿ.ಎಂ ಸುಗಂಧರಾಜು ಮಾತನಾಡಿ, ಭವ್ಯ ಭಾರತದ ಭವಿಷ್ಯವನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿದ್ದಾರೆ. ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಸಂವಿಧಾನ ಮೂಲ ಕಾರಣವಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಹಕ್ಕುಗಳನ್ನು ನೀಡಲಾಗಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಎಲ್ಲ ರೀತಿಯ ಕಾನೂನುಗಳನ್ನು ರಚಿಸಿದವರು ಅಂಬೇಡ್ಕರ್ ಅವರು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಇದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ಕಾರಣ. ಮಹಿಳೆಯರು ಅಂಬೇಡ್ಕರ್ ಅವರನ್ನು ಪ್ರತಿ ದಿನ ಸ್ಮರಿಸಿಕೊಳ್ಳಬೇಕು. ಮತದಾನದ ಹಕ್ಕನ್ನು ನೀಡುವ ಮೂಲಕ ಅಂಬೇಡ್ಕರ್ ಅವರು ಪ್ರಜೆಗಳಿಗೆ ಮತದಾನದ ಅಸ್ತ್ರವನ್ನು ನೀಡಿದ್ದಾರೆ. ಅವರ ಪ್ರತಿಮೆಗಳನ್ನು ಮಾಡಿ ಪೂಜಿಸುವ ಬದಲು ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ವಹಿಸಿದ್ದರು. ಈ ಸಂದರ್ಭದಲ್ಲಿ ಪಿಎಸ್ಐ ಚೇತನ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಸವರಾಜು, ಪತ್ರಕರ್ತ ಸಿ.ಎಂ ಸಿದ್ದರಾಮಯ್ಯ, ಕಾಲೇಜಿನ ಪ್ರಾಂಶುಪಾಲರಾ ಸೋಮಶೇಖರ್, ಉಪನ್ಯಾಸಕರಾದ ಸುರೇಶ್ , ಮನು, ನಾಗರತ್ನ, ಸುಶೀಲ, ಪ್ರೇಮಮ್ಮ, ಲಕ್ಷ್ಮೀ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.