ನಂಜನಗೂಡು: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನಂಜನಗೂಡು ನಗರದ ಪರಶುರಾಮ ದೇವಾಲಯದ ಬಳಿ ನಡೆದಿದೆ.

ನಗರದ ಪರಶುರಾಮ ದೇವಾಲಯದ ಬಳಿ ಇರುವ ಹೊಂಗೆ ಮರಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಅಥವಾ ಕಾಯಿಲೆಯಿಂದಲೋ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸುಮಾರು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯಾಗಿದ್ದು, 5.4 ಅಡಿ ಎತ್ತರ, ಕೋಲು ಮುಖ, ಸಾಧಾರಣ ಶರೀರ, ಎಣ್ಣೆಗೆಂಪು ಮೈಬಣ್ಣ, ಬಿಳಿ ತಲೆ ಕೂದಲು, ಗಡ್ಡ ಮೀಸೆ ಬಿಟ್ಟಿರುತ್ತಾರೆ. ಎಡಗೈ ಮೇಲೆ ಡಾ. ರಾಜ್ ಮತ್ತು ಮಂಜು ಎಂದು ಕನ್ನಡದಲ್ಲಿ ಹಚ್ಚೆ ಹಾಕಿಸಿರುತ್ತಾರೆ. ಹಸಿರು ಬಣ್ಣದ ಒಳಚಡ್ಡಿ ಧರಿಸಿರುತ್ತಾರೆ.

ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ, 08221 228383 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಪೊಲೀಸರು ಕೋರಿದ್ದಾರೆ.