ನಂಜನಗೂಡು: ಬೇಗೂರು-ಹೆಚ್.ಡಿ.ಕೋಟೆ ರಾಜ್ಯ ಹೆದ್ದಾರಿಯ ನಂಜನಗೂಡು ತಾಲ್ಲೂಕಿನ ಅಂಜನಾಪುರ ಗ್ರಾಮದ ಬಸ್ ಸ್ಟ್ಯಾಂಡ್ ಬಳಿ ಮಂಗಳವಾರ ಮಿನಿ ಟೆಂಪೋ ಮತ್ತು ಸ್ಕೂಟರ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಓರ್ವರಿಗೆ ಗಂಭೀರ ಗಾಯವಾಗಿದ್ದು, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಡಿಕ್ಕಿ ಹೊಡೆದ ಟೆಂಪೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಅಂಜನಾಪುರ ಬಸ್ ಸ್ಟ್ಯಾಂಡ್ ಬಳಿ ರಂಗಸ್ವಾಮಿ 43 ವರ್ಷ, ತಂದೆ ತಿಮ್ಮಯ್ಯ ಮತ್ತು ಸಿದ್ದರಾಜು ಎಂಬುವರು ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಅದೇ ವೇಳೆ ವೇಗವಾಗಿ ಬಂದ ಮಿನಿ ಟೆಂಪೋ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಂಗಸ್ವಾಮಿ ಪುಟ ಹಾರಿ ಬಸ್ ಸ್ಟ್ಯಾಂಡ್ ಒಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ವಿಪರೀತ ರಕ್ತಶ್ರಾವವಾಗಿದ್ದರಿಂದ ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ. ಸಿದ್ದರಾಜು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಡಿಕ್ಕಿ ಹೊಡೆದ ಮಿನಿ ಟೆಂಪೋ ಮಾಲೀಕ ರಾಚಯ್ಯ 65 ವರ್ಷ. ಹುಣಸೂರು ಮೂಲದವರಾದ ಅವರು ವಿವಿಧೆಡೆ ನಡೆಯುವ ಜಾತ್ರೆ ಮತ್ತು ಪೂಜಾ ಸ್ಥಳಗಳಿಗೆ ಬಲೂನ್, ಗೊಂಬೆ ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಿದ್ದರು. ಅಪಘಾತದ ಬಳಿಕ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಹುಲ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡೂ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.