ನಂಜನಗೂಡು: ವರುಣಾ ವಿಧಾನಸಭಾ ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದ ಶ್ರೀ ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಸುತ್ತೂರು ಜಾತ್ರಾ ಮಹೋತ್ಸವ ಇದೇ ಜ.15 ರಿಂದ 20 ರವರಗೆ ನಡೆಸಲಾಗುತ್ತದೆ ಎಂದು ಸುತ್ತೂರು ಮಠದ ಕಾರ್ಯದರ್ಶಿ ಮಂಜುನಾಥ್ ಹೇಳಿದರು.

ಸುತ್ತೂರು ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳ ದಿವ್ಯಾ ಸಾನಿಧ್ಯದ್ಲಲಿ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆಯಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದೇವೆ. ಜ.15 ರಂದು ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ, ದೋಣಿ ವಿಹಾರ ಮತ್ತು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಜ.16 ರಂದು ಸಾಮೂಹಿಕ ವಿವಾಹ, ರಾಜ್ಯಮಟ್ಟದ ಭಜನಾ ಮೇಳ, ದೇಶಿ ಆಟಗಳು, ಸೋಬಾನೆ ಪದ, ರಾಗಿ ಬೀಸುವ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಗಳ ಉದ್ಘಾಟನೆ ಹಾಗೂ ವೀರಭದ್ರೇಶ್ವರ ಸ್ವಾಮಿಯ ಕೊಂಡೋತ್ಸವ ನಡೆಯಲಿದೆ. ಜ. 17 ರಂದು ರಥೋತ್ಸವ, ಧಾರ್ಮಿಕ ಸಭೆ, ಚಿತ್ರಕಲೆ, ಗಾಳಿಪಟ ಸ್ಪರ್ಧೆ, ಮತ್ತು 55ನೇ ದನಗಳ ಜಾತ್ರೆಯನ್ನು ಉದ್ಘಾಟನೆ ಮಾಡಲಾಗುತ್ತದೆ.

ಜ.18 ರಂದು ಕೃಷಿ ವಿಚಾರ ಸಂಕಿರಣ ಉದ್ಘಾಟನೆ ಮತ್ತು ಶ್ರೀ ಮಹದೇಶ್ವರ ಕೊಂಡೋತ್ಸವ ಹಾಗೂ ಲಕ್ಷದೀಪೋತ್ಸವ ಜರುಗಲಿದೆ. ಜ.19 ರಂದು ತೆಪ್ಪೋತ್ಸವ, ಜ.20 ರಂದು ಅನ್ನ ಬ್ರಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಈಗೇ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ಜರುಗಲಿದೆ.

ಜಾತ್ರಾ ಮಹೋತ್ಸವಕ್ಕೆ ರಾಜ್ಯಪಾಲರು, ಸಿಎಂ ಸಿದ್ದರಾಮಯ್ಯ, ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರು, ಸಂಸದರು, ಶಾಸಕರು, ಆಗಮಿಸಲಿದ್ದಾರೆ ಎಂದು ತಿಳಿಸಿದರು. ದಾಸೋಹ ಸಮಿತಿಯ ಸುಬ್ಬಪ್ಪ ಮಾತನಾಡಿ, ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಮಹಾ ದಾಸೋಹಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ದಾಸೋಹ ತಯಾರಿಗೆ ಬೃಹತ್ ಗಾತ್ರದ ಪಾತ್ರೆಗಳ ಬಳಕೆ ಮಾಡಲಾಗಿದೆ.

ಪ್ರಸಾದ ವಿತರಣೆ ಸ್ಥಳದಲ್ಲಿ ಬ್ಯಾರೀಕೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ದಿನದ 24ಗಂಟೆ ಪ್ರಸಾದ ತಯಾರಿಸುತ್ತೇವೆ. 150ಕ್ಕೂ ಹೆಚ್ಚು ಅಡುಗೆ ಸಿಬ್ಬಂದಿಗಳು ಮಹಾ ದಾಸೋಹದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.1000 ಕ್ವಿಂಟಾಲ್ ಅಕ್ಕಿ, 250ಕ್ವಿಂಟಾಲ್ ತೊಗರಿಬೇಳೆ,

1700ಕ್ಯಾನ್ ಅಡುಗೆ ಎಣ್ಣೆ, 12ಟನ್ ಬೆಲ್ಲ, 3500ಕೆಜಿ ಖಾರದ ಪುಡಿ, 160ಕ್ವಿಂಟಾಲ್ ಕಡ್ಲೆ ಹಿಟ್ಟು, 200ಕ್ವಿಂಟಾಲ್ ಸಕ್ಕರೆ, 600ಕೆಜಿ ನಂದಿನಿ ತುಪ್ಪ, 750ಕೆಜಿ ದ್ರಾಕ್ಷಿ, 750 ಕೆಜಿ ಗೋಡಂಬಿ, 9ಸಾವಿರ ಲೀಟರ್ ಹಾಲು, 28ಸಾವಿರ ಲೀಟರ್ ಮೊಸರು, 5ಸಾವಿರ ಕೆಜಿ ಉಪ್ಪಿನಕಾಯಿ ದಾಸ್ತಾನು ಶೇಖರಣೆ ಮಾಡಲಾಗಿದೆ. ಪ್ರತಿದಿನ ಎರಡು ಲಕ್ಷ ಜನರಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸುತ್ತೂರು ಮಠದ ಕಾರ್ಯದರ್ಶಿ ಮಂಜುನಾಥ್, ಶಿವಕುಮಾರ್ , ಉದಯಶಂಕ‌ರ್, ಜಾತ್ರಾ ದಾಸೋಹ ಸಮಿತಿಯ ಸುಬ್ಬಪ್ಪ ಹಾಜರಿದ್ದರು.