ನಂಜನಗೂಡು: ಜಮೀನಿನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಿದ್ದು.ಆರ್ (62) ಮೃತ ದುರ್ದೈವಿ. ಚುಂಚನಹಳ್ಳಿ ಗ್ರಾಮದ ಶ್ರೀ ಸಿದ್ದಪ್ಪಾಜಿ ದೇವಾಲಯದ ಮುಂಭಾಗದಲ್ಲಿರುವ ಖಾಸಗಿ ಜಮೀನೊಂದರಲ್ಲಿ ಬೆಳ್ಳಂಬೆಳಿಗ್ಗೆ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಸಿದ್ದು.ಆರ್ ಎಂದು ಗುರುತಿಸಲಾಗಿದೆ. ವ್ಯಕ್ತಿಯ ಕತ್ತಿನಲ್ಲಿ ಬಿಗಿದಿರುವ ಹಗ್ಗ, ಕಾಲಿನ ಮಂಡಿಯಲ್ಲಿ ತರಚಿದ ಗುರುತುಗಳನ್ನು ಪತ್ತೆ ಹಚ್ಚಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಎಂ. ಧರ್ಮೇಂದ್ರ, ವೃತ್ತ ನಿರೀಕ್ಷಕ ಜಗದೀಶ್, ಪಿಎಸ್ಐ ಬಸವರಾಜು ಮತ್ತು ಪೊಲೀಸ್ ಸಿಬ್ಬಂದಿಗಳು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಮೀನಿನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ರಾತ್ರೋರಾತ್ರಿ ಶವವನ್ನು ಜಮೀನಿಗೆ ತಂದು ಇಡಲಾಗಿದೆ ಎನ್ನಲಾಗಿದೆ. ಸಾವಿನ ಸುತ್ತಾ ಅನುಮಾನದ ಹುತ್ತ ಬೆಳೆದುಕೊಂಡಿದ್ದು, ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ.
ನನ್ನ ತಂದೆ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ, ಯಾರೋ ಕೊಲೆ ಮಾಡಿ ಜಮೀನಿಗೆ ಬಿಸಾಡಿ ಹೋಗಿದ್ದಾರೆ. ಇದು ಅನುಮಾನಾಸ್ಪದ ಸಾವಾಗಿದೆ. ಆದ್ದರಿಂದ ಪೊಲೀಸರು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತ ವ್ಯಕ್ತಿಯ ಪುತ್ರ ರಮೇಶ್ ಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಕವಲಂದೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

