ನಂಜನಗೂಡು: ಚಿಕ್ಕ ಚಿಕ್ಕ ಕರುಗಳಾಗಿದ್ದ ಸಂದರ್ಭದಲ್ಲಿ ಸದೃಢರಾಗಿ ಬೆಳೆದಾಗ ಮಾತ್ರ ಮುಂದಿನ ದಿನಗಳಲ್ಲಿ ಆರೋಗ್ಯವಂತ ಹಸು ಆಗಿ ಹೈನುಗಾರಿಕೆ ಅಭಿವೃದ್ಧಿಯಾಗುತ್ತದೆ ಎಂದು ನಂಜನಗೂಡಿನ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಕಳಲೆ ಗ್ರಾಮದಲ್ಲಿ ಪಶುಪಾಲನ ಇಲಾಖೆ ಹಾಗೂ ಕಳಲೆ ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಹೆಣ್ಣು ಕರುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಹಾಗೂ ರೈತರನ್ನು ಉತ್ತೇಜನ ಮಾಡಲು ಉತ್ತಮ ಗುಣಮಟ್ಟದ ಕರುಗಳನ್ನು ಪೋಷಣೆ ಮಾಡಿರುವ ರೈತರ ಗುರುತು ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು. ಬಳಿಕ ಕಳಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್ ಮಾತನಾಡಿ ಪಶು ಇಲಾಖೆ ನಡೆಸುತ್ತಿರುವ ಈ ಕಾರ್ಯಕ್ರಮ ಉತ್ತಮವಾಗಿದೆ. ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದರು.
ಸುಬ್ಬಣ್ಣ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿವಿ ಪ್ರಸಾದ್ ಮಾತನಾಡಿ, ಕೃಷಿ ಜೊತೆಗೆ ಹೈನುಗಾರಿಕೆಯು ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಸರ್ಕಾರದ ಇಂತಹ ಕಾರ್ಯಕ್ರಮಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹೆಣ್ಣು ಕರುಗಳ ಪ್ರದರ್ಶನದಲ್ಲಿ ಚೆನ್ನಾಗಿ ಪೋಷಣೆ ಮಾಡಿರುವ ಸುಮಾರು ಎಂಟು ರೈತರಿಗೆ ಹಾಲಿನ ಕ್ಯಾನಗಳು ಹಾಗೂ ಔಷಧಿಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲತಾ ಮಹೇಶ್, ಉಪಾಧ್ಯಕ್ಷ ಹರೀಶ್, ಮಹೇಶ್, ಸಿವಿ ಪ್ರಸಾದ್, ಡಾ. ವಿವೇಕ್, ಡಾ. ರಾಘವೇಂದ್ರ, ಡಾ. ಜಗದೀಶ್, ಡಾ. ಚೇತನ್, ಡಾ. ಚೈತ್ರ,,ಪ್ರಭಾವತಿ, ಭಾಗ್ಯಮ್ಮ,ರಮೇಶ್, ರಾಹುಲ್, ತೇಜಸ್, ರೇಣುಕಾ, ದಿವ್ಯ, ಯಶೋಧ ಸೇರಿದಂತೆ ಗ್ರಾಮದ ಹಾಲು ಉತ್ಪಾದಕರು ಹಾಜರಿದ್ದರು.

