ನಂಜನಗೂಡು: ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೈಸೂರು ಜಿಲ್ಲಾ ಪೊಲೀಸ್, ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ಪೊಲೀಸ್ ಠಾಣೆ ಮೈಸೂರು ಜಿಲ್ಲೆ ವತಿಯಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್ಐ ಸುರೇಶ್ ಬೋಪಣ್ಣ ಮಾತನಾಡಿ, ಅವರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಅತಿ ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ಎಂಬ ಮೋಹದಿಂದ ಮುಕ್ತಿ ಹೊಂದಬೇಕು ಆಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಮೊಬೈಲ್ ಬಳಕೆ ಬಿಟ್ಟು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
ಸೈಬರ್ ನಿಯಮ ಮತ್ತು ಸಂಚಾರ ನಿಯಮಗಳನ್ನು ಅತಿ ಹೆಚ್ಚು ಉಲ್ಲಂಘಿಸಲಾಗುತ್ತಿದೆ. ಇನ್ನೆರಡು ನಿಯಂತ್ರಣಕ್ಕೆ ಬರಬೇಕಿದ್ದರೆ ಯುವಜನರು ಜಾಗೃತಗೊಳ್ಳಬೇಕು. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸಂಚಾರ ನಿಯಮಗಳ ಬಗ್ಗೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಬೇಕು. ಆಗ ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ. ಸೈಬರ್ ಅಪರಾಧವೂ ನಿಯಂತ್ರಣವಾಗುತ್ತದೆ. ಇಂಥ ಕಾರ್ಯಗಳಿಗೆ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಬಳಿಕ ಸೈಬರ್ ಕ್ರೈಂ ನ ಪೊಲೀಸ್ ಅಧಿಕಾರಿ ಸಿ.ಎನ್ ಮಹೇಶ್ ಮಾತನಾಡಿ, ಸೈಬರ್ ಕ್ರೈಂ ಬಗ್ಗೆ ಜನರು ಜಾಗೃತರಾಗಿರಬೇಕು ಮತ್ತು ಪ್ರತಿಯೊಂದು ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಬಾರದು. ಹೆಚ್ಚು ತಾಂತ್ರಿಕ ಜ್ಞಾನ ಬಳಕೆ ಮಾಡುವ ವಿದ್ಯಾರ್ಥಿಗಳು ಸೈಬರ್ ವಂಚನೆಗೆ ಹೆಚ್ಚು ಗುರಿಯಾಗುತ್ತಿದ್ದಾರೆಂದು ತಿಳಿಸಿದರು.
ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಯವನ್ನು ಹುಟ್ಟಿಸುವುದರ ಮೂಲಕ ವಿದ್ಯಾವಂತರನ್ನೇ ದೋಚಲಾಗುತ್ತಿದೆ. ಇವುಗಳ ಬಗ್ಗೆ ಅರಿವು ಹೊಂದಿ ಜನತೆ ಧೈರ್ಯದಿಂದ ಇದ್ದು ತಮ್ಮ ಆರ್ಥಿಕ ಸಂಪನ್ಮೂಲವನ್ನು ರಕ್ಷಿಸಿಕೊಳ್ಳಬೇಕು.
ವರ್ಕ ಫ್ರಾಮ್ ಹೋಂ ಎಂಬ ವಾಟ್ಸಾಪ್ ಗ್ರುಪ್ ಬಗ್ಗೆಯೂ ಜನತೆ ಎಚ್ಚರದಿಂದಿದ್ದು, ಯಾವುದೇ ಮಾಹಿತಿಯನ್ನು ನೀಡಬಾರದು ಎಂದು ಸಲಹೆ ನೀಡಿದರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕೆಲವರು ದರ್ಬಳಕೆ ಮಾಡಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಆನ್ ಲೈನ್ ವ್ಯಹಾರಗಳ ಆಸೆಗೆ ಬಿದ್ದು, ತಮ್ಮ ಹಣವನ್ನು ಕಳೆದುಕೊಂಡ ಹಲವರ ಉದಾಹರಣೆಗಳನ್ನು ಉಲ್ಲೇಖಿಸಿ ಅವುಗಳಿಂದ ದೂರವಿರುವಂತೆ ತಿಳಿಸಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಬಹಳಷ್ಟು ಜಾಗರೂಕತೆಯಿಂದ ಮಾಡುವುದರ ಮೂಲಕ ಇಂತಹ ವಂಚನೆ ಪ್ರಕರಣಗಳಿಂದ ದೂರವಿರಬೇಕು. ಆಕರ್ಷಕ ಯೋಜನೆಗಳು ಮತ್ತು ಹಲವು ಆಮಿಷಗಳಿಗೆ ಒಳಗಾಗದೆ, ಕಂಪ್ಯೂಟರ್ ಹಾಗೂ ಅಂತರ್‌ಜಾಲದ ಮೂಲಕ ಜಾಣರೇ ನಡೆಸುವ ಇಂತಹ ಕೃತ್ಯಗಳಿಂದ ರಕ್ಷಣೆ ಪಡೆಯಬೇಕು. ಈ ದಿಶೆಯಲ್ಲಿ ಪೊಲೀಸ್ ಇಲಾಖೆಯ ಇಂತಹ ಅರಿವಿನ ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಿಎಸ್ಐ ಸುರೇಶ್ ಬೋಪಣ್ಣ, ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ ಸಿ.ಎನ್ ಮಹೇಶ್, ಸಿಬ್ಬಂದಿ ನಜೀರ್, ಕಾಲೇಜಿನ ಉಪನ್ಯಾಸಕರಾದ ಯೋಗೇಶ್, ನಟರಾಜು, ಕಾವ್ಯ, ದೈಹಿಕ ಶಿಕ್ಷಣ ಶಿಕ್ಷಕಿ ಅರ್ಚನಾ, ಪತ್ರಕರ್ತರಾದ ಸಿ.ಎಂ ಸುಗಂಧರಾಜು, ಪಿ.ಶಿವಕುಮಾರ್ ಸೇರಿದಂತೆ ಹಲವರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

