ನಂಜನಗೂಡು: ಈಗಾಗಲೇ ರೈತರು ಹೇಳಿರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲು ತಾಲ್ಲೂಕಿನ ಎಲ್ಲಾ ಅಧಿಕಾರಿಗಳಿಗೂ ಕಟ್ಟುನಟ್ಟಿನ ಕ್ರಮ ವಹಿಸುವಂತೆ ಸೂಚಿಸಲಾಗುವುದು ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ರೈತರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ತಾಲ್ಲೂಕು ಮಟ್ಟದ ರೈತರ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಬಾರಿ 2023ರಲ್ಲಿ ರೈತರ ಸಭೆ ನಡೆದಿತ್ತು. ಆ ಸಭೆಯ ಪ್ರಕಾರದಂತೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಲಾಗಿದೆ.
ಇನ್ನು ಮತ್ತಷ್ಟು ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಬಗೆಹರಿಸಲಾಗುತ್ತದೆ. ತಾಲ್ಲೂಕು ಕಛೇರಿಯ ಶೌಚಾಗೃಹ, ಕುಡಿಯುವ ನೀರು, ಪ್ರಮಾಣ ಪತ್ರ ಪಡೆಯಲು ಆಗುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ನಾಡಕಛೇರಿಯಲ್ಲಿ ಇದ್ದು ಕೆಲಸ ಮಾಡಲು ಕ್ರಮವಹಿಸುತ್ತೇನೆ ಎಂದರು.
ನಂಜನಗೂಡು ತಾಲ್ಲೂಕಿನ ಎಲ್ಲಾ ಅಧಿಕಾರಿಗಳಿಗೆ ಪ್ರತಿವಾರ ಹಾಗೂ ತಿಂಗಳಿಗೊಮ್ಮೆ ಸಭೆ ನಡೆಸುತ್ತಾರೆ. ಆದರೆ, ರೈತರ ಸಭೆಯನ್ನು ಮಾತ್ರ ಎರಡು ವರ್ಷ ಹಾಗೂ 3 ವರ್ಷಗಳಿಗೊಮ್ಮೆ ನಡೆಯುತ್ತಿದ್ದೀರಿ. ಇದು ಅರ್ಥಪೂರ್ಣ ಸಭೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಳೆಯಿಂದ ಕಳೆದ ವರ್ಷ ಹಾನಿಯಾಗಿರುವ ರೈತರ ಬೆಳೆಗಳಿಗೆ ಇನ್ನು ಕೂಡ ಸರಿಯಾದ ಪರಿಹಾರ ಸಿಕ್ಕಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.
ಅಕ್ರಮ ಮಧ್ಯ ಮಾರಾಟ ನಡೆಯುತ್ತಿದ್ದರು ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕಾಡು ಪ್ರಾಣಿಗಳ ಕಾಟ ಮಿತಿಮೀರಿದೆ. ತಾಲ್ಲೂಕಿನಲ್ಲಿ 34 ಸಾವಿರ ಪೌತಿಖಾತೆಗಳು ಆಗಿಲ್ಲ. ತಾಲ್ಲೂಕು ಕಛೇರಿಯಲ್ಲಿ ಬಡ ರೈತರಿಗೆ ಒಂದು ನ್ಯಾಯ. ಶ್ರೀಮಂತರಿಗೆ ಮತ್ತೊಂದು ನ್ಯಾಯ. ದುಡ್ಡು ಕೊಟ್ಟವರಿಗೆ ಒಂದೇ ದಿನದಲ್ಲಿ ದಾಖಲಾತಿಗಳು ಸಿಗುತ್ತವೆ. ಸಾಮಾನ್ಯ ಜನರಿಗೆ ವರ್ಷಗಟ್ಟಲೆ ಕಛೇರಿಗೆ ಅಲೆಸುತ್ತಾರೆ.
ತಾಲ್ಲೂಕಿನ ಎಲ್ಲಾ ನಾಡಕಚೇರಿಗಳಲ್ಲಿ ಅಧಿಕಾರಿಗಳು ಇದ್ದು ಕೆಲಸ ಮಾಡುತ್ತಿಲ್ಲ. ಜನನ ಪ್ರಮಾಣ ಪತ್ರ ಪಡೆಯಲು ಲಂಚ ಕೇಳುತ್ತಾರೆ. ಈ ಸಂಬಂಧ ಕೇಳಿದರೆ ರೈತರ ಮೇಲೆ ದೌರ್ಜನ್ಯ ಮಾಡುತ್ತಾರೆ. ತಾಲ್ಲೂಕಿನ ಹಲವು ನಾಡಕಛೇರಿಗಳಲ್ಲಿ ಗ್ರಾಮ ಸಹಾಯಕರನ್ನು ಬಳಸಲಾಗುತ್ತಿದೆ. ಕೆರೆ ಒತ್ತುವರಿ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ . ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಜಮೀನುಗಳಿಗೆ ತೆರಳುವ ರಸ್ತೆ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ.
ಕೆರೆಗಳಲ್ಲಿ ಹೂಳು ತುಂಬಿದ್ದು, ತೆಗೆಸಲು ಸಾಧ್ಯವಾಗುತ್ತಿಲ್ಲ ತಗಡೂರು ಗ್ರಾಮ ಪಂಚಾಯಿತಿ ಕಾಮಗಾರಿಯಲ್ಲಿ 10 ಲಕ್ಷ ರೂಗಳನ್ನು ಅಕ್ರಮ ಮಾಡಿದ್ದಾರೆ. ಹುಲ್ಲಹಳ್ಳಿ ನಾಡಕಛೇರಿಯಲ್ಲಿ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಸಭೆಗೆ ಹಲವು ಇಲಾಖೆಯ ಅಧಿಕಾರಿಗಳು ಬಾರದೆ ಇರುವ ಕಾರಣ ಸಭೆ ಅಪೂರ್ಣವಾಗಿದೆ. ತಾಲ್ಲೂಕು ಕಛೇರಿಯಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ತಾಲ್ಲೂಕು ಕಛೇರಿ ಆವರಣದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಗೃಹ ವ್ಯವಸ್ಥೆ ಮಾಡಿಲ್ಲ. ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ನೋಟಿಸ್ ಜಾರಿ ಮಾಡುವಂತೆ ತಹಶೀಲ್ದಾರ್ ರವರಿಗೆ ಆಗ್ರಹಿಸಿದರು.
ರೈತರ ಕುಂದು ಕೊರತೆಗಳ ಸಭೆಗೆ ಕೆಲವು ಇಲಾಖೆಗಳ ಅಧಿಕಾರಿಗಳು ಬಂದಿಲ್ಲ. ಸಭೆ ಮುಗಿಯುವ ಒಳಗೆ ಸಭೆಗೆ ಅಧಿಕಾರಿಗಳು ಹಾಜರಾಗುವಂತೆ ರೈತರು ಸಭೆಯಲ್ಲಿಯೇ ಪ್ರತಿಭಟಿಸಿದರು. ದೂರವಾಣಿ ಕರೆಯ ಮೂಲಕ ಗೈರುಹಾಜರಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಭೆಗೆ ಹಾಜರಾಗುವಂತೆ ಸೂಚಿಸಲಾಯಿತು. ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಭರವಸೆ ನೀಡಿದರು.

