ನಂಜನಗೂಡು: ಗಬ್ಬೆದ್ದು ನಾರುತ್ತಿರುವ ಚರಂಡಿ ವ್ಯವಸ್ಥೆಗೆ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ವರ್ಷಗಳೇ ಉರುಳಿದರೂ ಚರಂಡಿಗಳು ಮಾತ್ರ ಸ್ವಚ್ಛತೆ ಕಾಣದೆ ದುರ್ನಾತ ಬೀರುತ್ತಿವೆ. ಗ್ರಾಮ ಪಂಚಾಯಿತಿ ಆಡಳಿತಕ್ಕೆ ಗ್ರಾಮಸ್ಥರು ಇಡೀ ಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂಜನಗೂಡು ತಾಲ್ಲೂಕಿನ ನವಿಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಳಾರಹುಂಡಿ ಗ್ರಾಮದಲ್ಲಿ ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ದುರ್ವಾಸನೆ ಮತ್ತು ಚರಂಡಿಯಲ್ಲಿ ತುಂಬಿರುವ ಕೊಳಚೆ ನೀರು ಮತ್ತು ಕಸ ಕಡ್ಡಿಗಳು ಎಲ್ಲರನ್ನು ಸ್ವಾಗತಿಸುತ್ತಿವೆ. ಗ್ರಾಮದ ಕುರುಬ ಸಮುದಾಯ ವಾಸಿಸುವ ಬೀದಿಯಲ್ಲಿರುವ ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತು, ಗಬ್ಬೆದ್ದು ನಾರುತ್ತಿದೆ.
ಚರಂಡಿಗೆ ಕಸ ಕಡ್ಡಿಗಳು, ಪ್ಲಾಸ್ಟಿಕ್ ವಸ್ತುಗಳು ತುಂಬಿಕೊಂಡು ದುರ್ನಾತ ಬೀರುತ್ತಿದೆ. ಅಲ್ಲದೆ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾತ್ರಿಯಾದರೆ ಸಾಕು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಮಕ್ಕಳು ಮತ್ತು ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು, ಚರಂಡಿಯನ್ನು ಸ್ವಚ್ಛತೆ ಮಾಡುವಂತೆ ಕಳೆದ ಎರಡು ಮೂರು ವರ್ಷಗಳಿಂದಲೂ ನವಿಲೂರು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದ್ರು ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಈ ಬಗ್ಗೆ ಶಾಸಕರಾದ ದರ್ಶನ್ ಧ್ರುವ ನಾರಾಯಣ್ ರವರಿಗೆ ತಿಳಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಿಲ್ಲ.
ಗ್ರಾಮ ಪಂಚಾಯತಿಯಿಂದ ಬರುವ ಸ್ವಚ್ಛ ವಾಹನವು ಸರಿಯಾಗಿ ಬರುತ್ತಿಲ್ಲ ಇದರಿಂದ ಗ್ರಾಮದಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಕೂಡಲೇ ಇನ್ನೂ ಒಂದು ವಾರದಲ್ಲಿ ಚರಂಡಿಗಳನ್ನು ಮತ್ತು ಗ್ರಾಮವನ್ನು ಸ್ವಚ್ಛತೆ ಮಾಡಬೇಕು ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲೇ ಕಸ ಸುರಿದು ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

