ನಂಜನಗೂಡು: ಮಕ್ಕಳ ಹಾಗೂ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ನಂಜನಗೂಡಿನ ಶ್ರಾವಣ ಕಲ್ಯಾಣ ಮಂಟಪದಲ್ಲಿ ರಾಜ್ಯಮಟ್ಟದ ಫ್ಯಾಷನ್ ಶೋ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.

ಆರ್‌ಬಿಸಿ ಇವೆಂಟ್ಸ್ ಮ್ಯಾನೇಜ್ಮೆಂಟ್ ತಂಡದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಸಿ. ಚಿಕ್ಕರಂಗನಾಯಕ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, “ಯಾರೂ ಶ್ರೇಷ್ಠರಲ್ಲ, ಯಾರೂ ಕನಿಷ್ಠರಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಶ್ರೇಷ್ಠ–ಕನಿಷ್ಠ ಎಂಬ ಭೇದಭಾವವನ್ನು ಬದಿಗಿಟ್ಟು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಹೊರತರುವ ಕೆಲಸ ಮಾಡಬೇಕು” ಎಂದು ಹೇಳಿದರು.

ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹಾಗೂ ಧೈರ್ಯ ಹೆಚ್ಚುತ್ತದೆ. ಆರ್‌ಬಿಸಿ ಇವೆಂಟ್ಸ್ ಮ್ಯಾನೇಜ್ಮೆಂಟ್ ತಂಡವು ಮೌಲ್ಯಾಧಾರಿತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೇ ಮೊದಲ ಬಾರಿಗೆ ನಂಜನಗೂಡಿನಲ್ಲಿ ರಾಜ್ಯಮಟ್ಟದ ಫ್ಯಾಷನ್ ಶೋ ಆಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳೆಸಲು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಕೇವಲ ಶಿಕ್ಷಣ ನೀಡುವುದಷ್ಟೇ ಅಲ್ಲದೆ, ವಿನಯ, ಸಂಸ್ಕಾರ ಹಾಗೂ ನಮ್ಮ ನಾಡಿನ ಸಂಸ್ಕೃತಿಯ ಮೌಲ್ಯಗಳನ್ನು ಕಲಿಸಬೇಕು. ತಂದೆ-ತಾಯಿಗಳ ಶ್ರಮವನ್ನು ಮಕ್ಕಳು ಅರಿತುಕೊಂಡು ಜವಾಬ್ದಾರಿಯುತ ಹಾಗೂ ಉತ್ತಮ ನಾಗರಿಕರಾಗಿ ಬೆಳೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತಮ್ಮ ಪ್ರತಿಭೆ ಹಾಗೂ ಆತ್ಮವಿಶ್ವಾಸವನ್ನು ವೇದಿಕೆಯಲ್ಲಿ ಅನಾವರಣಗೊಳಿಸಿದರು. ಫ್ಯಾಷನ್ ಶೋನಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಸ್ಪರ್ಧಾರ್ಥಿಗಳ ಪ್ರದರ್ಶನ ಗಮನ ಸೆಳೆಯಿತು.

ಹಿರಿಯರ ವಿಭಾಗದಲ್ಲಿ ಮೇಘನಾ ಶ್ರೀ ಅವರು ಪ್ರಥಮ ಸ್ಥಾನ ಪಡೆದು 10 ಸಾವಿರ ನಗದು ಬಹುಮಾನ ಪಡೆದರು. ಮಧುಮಿಥೆ ಅವರು ದ್ವಿತೀಯ ಸ್ಥಾನ ಪಡೆದು 5 ಸಾವಿರ ನಗದು ಬಹುಮಾನ ಪಡೆದರು.

ಕಿರಿಯರ ವಿಭಾಗದಲ್ಲಿ ಸಿಂಚನ ಆರ್. ಅವರು ಪ್ರಥಮ ಸ್ಥಾನ ಪಡೆದು 10 ಸಾವಿರ ನಗದು ಬಹುಮಾನ ಪಡೆದರೆ, ಜೇನಿತಾ ಅವರು ದ್ವಿತೀಯ ಸ್ಥಾನ ಪಡೆದು 5 ಸಾವಿರ ನಗದು ಬಹುಮಾನ ಪಡೆದರು.

ರಾಜ್ಯಮಟ್ಟದ ಫ್ಯಾಷನ್ ಶೋ ಮೂಲಕ ನಂಜನಗೂಡಿನ ವೇದಿಕೆಯಲ್ಲಿ ವಿವಿಧ ಪ್ರತಿಭೆಗಳಿಗೆ ಅವಕಾಶ ದೊರೆತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಾವಂತರನ್ನು ಗುರುತಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮುಂದುವರಿಯಲಿದೆ ಎಂದು ಆಯೋಜಕರಾದ ಹರ್ಷಿತ್ ರಾಜ್ ಹಾಗೂ ಕಾರ್ತಿಕ್ ರಾಜ್ ತಿಳಿಸಿದರು.

ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ನಿಶಿ ಅಪ್ಪಣ್ಣ, ವರ್ಷ ನಂಜಪ್ಪ ಹಾಗೂ ಮಂಜು ಅವರು ಭಾಗವಹಿಸಿ ಸ್ಪರ್ಧಾರ್ಥಿಗಳ ಪ್ರತಿಭೆಯನ್ನು ಮೌಲ್ಯಮಾಪನ ಮಾಡಿದರು. ಇದೇ ಸಂದರ್ಭದಲ್ಲಿ ಆರ್ ಬಿಸಿ ಇವೆಂಟ್ಸ್ ಮ್ಯಾನೇಜ್ಮೆಂಟ್ ಮಾಲೀಕರಾದ ರಾಜಶೇಖರ್ ದಂಪತಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆರ್‌ಬಿಸಿ ಮಾಲೀಕರಾದ ರಾಜಶೇಖರ್, ಶ್ರೀಧರ್ ದೀಕ್ಷಿತ್, ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಹರ್ಷಿತ್ ಕುಮಾರ್, ಆಯೋಜಕರಾದ ಹರ್ಷಿತ್ ರಾಜ್ ಹಾಗೂ ಕಾರ್ತಿಕ್ ರಾಜ್ ಸೇರಿದಂತೆ ಸ್ಪರ್ಧಿಗಳು ಉಪಸ್ಥಿತರಿದ್ದರು.