ಮೈಸೂರು: ರೈತರಲ್ಲಿ ಜಾಗೃತಿ ಹಾಗೂ ಅನ್ನದಾತರ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಡಿ.23ರಂದು ಬೆಳಗ್ಗೆ 10ಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ರೈತ ದಿನ-ರೈತರ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ತಾವು ಅಧ್ಯಕ್ಷತೆ ವಹಿಸಲಿದ್ದು, ವಿಶ್ವ ಪರಿಸರ ವಿಜ್ಞಾನಿ ಚಂದ್ರಶೇಖರ್ ಬಿರಾದಾರ್, ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಶರಣಪ್ಪ ವಿ.ಹಲಸೆ, ಸಾವಯವ ಪ್ರಗತಿಪರ ಕೃಷಿಕ ಕಲ್ಮೇಶ ಯಲ್ಲದಗಿ, ತಮಿಳುನಾಡಿನ ರೈತ ಮುಖಂಡ ಪಿ.ಆರ್.ಪಾಂಡ್ಯನ್, ರಾಮನಗೌಂಡರ್, ತೆಲಂಗಾಣದ ವೆಂಕಟೇಶ್ವರ ರಾವ್, ಕೇರಳದ ಕೆ.ವಿ.ಬಿಜು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ವಿ.ಸೋಮಣ್ಣ, ಕುಲಪತಿ ಶರಣಪ್ಪ ವಿ. ಹಲಸೆ, ಕಲ್ಮೇಶ್ ಯಲದಗಿ, ಕೆ.ವಿ.ಬಿಜು, ರಾಮನ್ ಗೌಂಡರ್ ಉಪಸ್ಥಿತರಿರುವರು, ಈ ವೇಳೆ ಪ್ರಗತಿಪರ ರೈತರಿಗೆ ಗೌರವ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.

ಆಹಾರ ಉತ್ಪಾದನೆಗೆ ರೈತ ಮತ್ತು ಕೃಷಿ ಕಾರ್ಮಿಕರ ಶ್ರಮ ಕಾರಣವಾಗಿದೆ. ಈ ಹಿಂದೆ ಆಹಾರ ಸ್ವಾವಲಂಬನೆ ಸಾಧ್ಯವಾಗಿರಲಿಲ್ಲ. ಆದರೆ ಈಗ ಬೇರೆ ದೇಶಗಳಿಗೂ ರಫ್ತು ಮಾಡುವ ಸ್ಥಿತಿಯಲ್ಲಿದ್ದೇವೆ. ಹೀಗಾಗಿ ರೈತರಲ್ಲಿ ಜಾಗೃತಿ ಮೂಡಿಸಿ, ಜನರಿಗೆ ಅನ್ನದಾತರ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಈಗ ರೈತರ ಬದುಕು ಸಂಕಷ್ಟದಲ್ಲಿದ್ದು, ಈ ಕುರಿತು ಕ್ರಮಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು ಕೆಲವೊಂದು ಬೇಡಿಕೆ ಮಂಡಿಸಲಾಗುವುದು ಎಂದು ತಿಳಿಸಿದರು.

ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾದ ಜನಪ್ರತಿನಿಧಿಗಳು ಸದನದಲ್ಲಿ ರೌಡಿಗಳಂತೆ, ಗೋಮುಖ ವ್ಯಾಘ್ರಗಳಂತೆ ವರ್ತಿಸಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಯಾವುದೇ ಆಮಿಷಗಳಿಗೆ ಒಳಗಾಗದೆ ಉತ್ತಮರನ್ನು ಆಯ್ಕೆ ಮಾಡಬೇಕು. ಆಗ ಈ ರೀತಿಯ ಘಟನೆಗಳು ನಡೆಯುವುದಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಜಿಲ್ಲಾ ಕಾರ್ಯದರ್ಶಿ ಬರಡನಪುರ ನಾಗರಾಜ್, ಪೈಲ್ವಾನ್ ವೆಂಕಟೇಶ, ಸುನಿಲ್, ಸೂರಿ ಇದ್ದರು