ನಂಜನಗೂಡು: ವಾಹನಗಳ ಸುಗಮ ಸಂಚಾರಕ್ಕಾಗಿ ಅಭಿವೃದ್ದಿ ಪಡಿಸಿದ ರಾಜ್ಯ ಹೆದ್ದಾರಿಗಳು ರಾಗಿ, ಹುರಳಿ ಒಕ್ಕಣೆ ಕೇಂದ್ರಗಳಾಗಿ ಮಾರ್ಪಟ್ಟಿವೆ. ಒಕ್ಕಣೆಗಾಗಿ ಸುರಿದ ರಾಗಿ ಹುರಳಿ ಸೊಪ್ಪಿನ ಜಾಲಕ್ಕೆ ಸಿಲುಕಿದ ವಾಹನಗಳು ಮುಂದೆ ಸಾಗಲು ಸಾಧ್ಯವಾಗದೆ ಪರಿಪಾಟಲು ಅನುಭವಿಸುತ್ತಿವೆ.

ಪ್ರಯಾಣಿಕರಂತೂ ನಿಗದಿತ ಸಮಯಕ್ಕೆ ತೆರಳಲು ಸಾಧ್ಯವಾಗದೆ ಬವಣೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಒಕ್ಕಣೆ ಮಾಡಬಾರದೆಂಬ ನಿಯಮ ಇದ್ದರೂ ಕ್ಯಾರೆ ಎನ್ನದ ರೈತರು, ರಾಶಿ ರಾಶಿಯಾಗಿ ಸುರಿದು ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದಾರೆ.

ಹೆಚ್.ಡಿ.ಕೋಟೆ ಮಾರ್ಗವಾಗಿ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದಿಂದ ಬೇಗೂರು ಮೂಲಕ ಊಟಿಗೆ ತೆರಳುತ್ತಿದ್ದ ಸಂಶೋಧನಾ ವಿದ್ಯಾರ್ಥಿಗಳ ಟ್ರಾವೆಲ್ಸ್ ವಾಹನ ಹುರುಳಿ ಸೋಪ್ಪಿಗೆ ಸಿಲುಕಿದೆ. ಸುಮಾರು 5 ಗಂಟೆಗಳ ಕಾಲ ಶ್ರಮಿಸಿದ ವಾಹನ ಸಿಬ್ಬಂದಿಗಳು ಹುರುಳಿ ಸೋಪ್ಪಿನಿಂದ ಹೊರಬಂದು ತಮ್ಮ ದಾರಿ ಹಿಡಿದಿದ್ದಾರೆ.

ಹೆಡಿಯಾಲ ಬೇಗೂರು ಮಾರ್ಗವಾಗಿ ನಂಜನಗೂಡು, ಗುಂಡ್ಲುಪೇಟೆಗೆ ತೆರಳುವ ರಾಜ್ಯ ಹೆದ್ದಾರಿ ಹಾಗೂ ಹೆಡಿಯಾಲ, ಹುರ ಮಾರ್ಗವಾಗಿ ಹುಲ್ಲಹಳ್ಳಿ ನಂಜನಗೂಡು ಮತ್ತು ಮೈಸೂರಿಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಒಕ್ಕಣೆ ಮಾಡುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿದೆ. ಆಂಬ್ಯುಲೆನ್ಸ್ ಸಹ ಸಿಲುಕಿದ ಉದಾಹರಣೆಗಳಿವೆ. ಇನ್ನು ಒಕ್ಕಣೆ ಮಾಡುವ ಸೀಸನ್ ಶುರುವಾಗಿದೆ. ಹೆದ್ದಾರಿಗಳಲ್ಲೇ ರಾಜಾರೋಷವಾಗಿ ಒಕ್ಕಣೆ ಮಾಡಲು ಇವರಿಗೆ ಅನುಮತಿ ನೀಡಿದವರು ಯಾರು..?

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಏಕೆ…? ಸ್ಥಳೀಯ ಆಡಳಿತ ಯಂತ್ರ ಸಹ ಅಸಹಾಯಕತೆ ಪ್ರದರ್ಶಿಸುತ್ತಿರುವುದು ಏಕೆ..? ಈ ಅಪಾಯಕ್ಕೆ ಎಡೆ ಮಾಡಿಕೊಟ್ಟಿರುವ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಚಾಟಿ ಬೀಸುವವರೇ ಕಾದು ನೋಡಬೇಕಿದೆ.