ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಕಿರುಗುಂದ ಗ್ರಾಮದ ಗ್ರಾಮೀಣ ಪ್ರತಿಭೆ, ಜಾನಪದ ಕಲಾವಿದರು ಹಾಗೂ ಕೀಬೋರ್ಡ್ ವಾದಕರಾದ ಶ್ರೀನಿವಾಸಮೂರ್ತಿ ಕಿರುಗುಂದ ಅವರಿಗೆ ಗಡಿನಾಡ ರಂಗಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ-ತಮಿಳುನಾಡು ಗಡಿ ಗ್ರಾಮವಾದ ಚಾಮರಾಜನಗರ ಜಿಲ್ಲೆಯ ಮೂಕನಪಾಳ್ಯ ಗ್ರಾಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಂಗದೀವಿಗೆ ಚಾಮರಾಜನಗರ (ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಾಮರಾಜನಗರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗಡಿನಾಡ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಡಿಭಾಗದ ಕಲೆ-ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಸಾಧಕರನ್ನು ಗುರುತಿಸುವ ಉದ್ದೇಶದಿಂದ ನೀಡುವ ಈ ಪ್ರಶಸ್ತಿಗೆ ಕಿರುಗುಂದದ ಶ್ರೀನಿವಾಸಮೂರ್ತಿ ಅವರು ಭಾಜನರಾಗಿದ್ದಾರೆ. ಅವರು ಹಲವು ವರ್ಷಗಳಿಂದ ಜಾನಪದ ಕಲೆ, ಭಜನೆ, ನಾಟಕಗಳಲ್ಲಿ ಕೀಬೋರ್ಡ್ ವಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದ ಯುವಕರಿಗೆ ಸಂಗೀತ ತರಬೇತಿ ನೀಡುವ ಮೂಲಕವೂ ಅವರು ಕಲೆಯನ್ನು ಬೆಳೆಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಂಕನಪುರ ಮಹದೇವು, ರಂಗಕರ್ಮಿ ಕಲೆ ನಟರಾಜು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದು ಶ್ರೀನಿವಾಸಮೂರ್ತಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. ಗಡಿಭಾಗದ ಕಲಾವಿದನೊಬ್ಬನಿಗೆ ರಾಜ್ಯ ಮಟ್ಟದ ಮಾನ್ಯತೆ ಸಿಕ್ಕಿರುವುದು ಕಿರುಗುಂದ ಹಾಗೂ ನಂಜನಗೂಡು ತಾಲ್ಲೂಕಿನ ಜನರಲ್ಲಿ ಸಂತಸ ಮೂಡಿಸಿದೆ. ಸ್ಥಳೀಯರು ಹಾಗೂ ಅಭಿಮಾನಿಗಳು ಶ್ರೀನಿವಾಸಮೂರ್ತಿ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

