ನಂಜನಗೂಡು: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾರ್ಯ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿಯ ಕಾರ್ಯ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸುಮಾರು ಮೂರು ದಿನಗಳ ಕಾಲ ನಡೆಸಲಾಗುತ್ತದೆ. ಮುಂಜಾನೆ ಅರ್ಚಕರು ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿ ಸುತ್ತೂರಿನ ಕಪಿಲಾ ನದಿಯಲ್ಲಿ ನೀರನ್ನು ತಂದು ಶ್ರೀ ಸಿದ್ದೇಶ್ವರ ಸ್ವಾಮಿಯ ವಿಗ್ರಹಕ್ಕೆ ಅಭಿಷೇಕ ಮಾಡಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯವರ ಪಲ್ಲಕ್ಕಿ ಉತ್ಸವಕ್ಕೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ವಾಟಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ವಿದ್ಯುಕ್ತವಾಗಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ವಸ್ತ್ರಾಲಂಕಾರ, ಹೂವಿನ ಅಲಂಕಾರಗಳಿಂದ ಶೃಂಗರಿಸಲಾಗಿದ್ದ ಐತಿಹಾಸಿಕ (ಖುರ್ಜು) ಅನ್ನು ರಥೋತ್ಸವಕ್ಕೆ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಈಡುಗಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ಸಿಕ್ಕಿತು. ಗ್ರಾಮದಿಂದ ಗ್ರಾಮಸ್ಥರು ಊರಿನ ಗ್ರಾಮ ಪಂಚಾಯಿತಿ ತನಕ ಎಳೆದರು.

ನಂತರ ಗ್ರಾಮಸ್ಥರು ಮತ್ತು ಭಕ್ತರು ತಮ್ಮ ಹೆಗಲ ಮೇಲೆ ಖುರ್ಜು ರಥೋತ್ಸವವನ್ನು ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟಕ್ಕೆ ಹೊತ್ತುಕೊಂಡು ತೆರಳಿದರು. ಪ್ರಮುಖ ಆಕರ್ಷಣೆಯಾಗಿರುವ ರಥೋತ್ಸವಕ್ಕೆ ಭಕ್ತರು ಹಣ್ಣು ಜವನ ಎಸೆದು ಪುನೀತರಾದರು. ಬೆಟ್ಟದ ಮೇಲಕ್ಕೆ ಹೆಗಲ ಮೇಲೆ ಹೊತ್ತುಕೊಂಡು ಬರುತ್ತಿದ್ದ ದೃಶ್ಯ ಕಂಡು ಮೈ ರೋಮಾಂಚನಗೊಂಡಿತು. ಉಘೇ ಉಘೇ ಸಿದ್ದೇಶ್ವರ ಎಂದು ಭಕ್ತರು ಘೋಷಣೆ ಕೂಗುತ್ತ ಸಾಗಿದರು.

ಲಕ್ಷಾಂತರ ಭಕ್ತರು ರಥೋತ್ಸವವ್ನನು ಕಣ್ತುಂಬಿಕೊಂಡರು. ಹರಕೆ ಹೊತ್ತ ಭಕ್ತರು ಮಜ್ಜಿಗೆ ಪಾನಕ ಸೇರಿದಂತೆ ತಂಪು ಪಾನೀಯವನ್ನು ವಿತರಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ರಘು, ಸಿಪಿಐ ಚಂದ್ರಶೇಖರ್, ಪಿಎಸ್ಐ ಬಸವರಾಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.