ನಂಜನಗೂಡು : ನಂಜನಗೂಡಿನ ಕಪಿಲಾ ನದಿ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಶ್ರೀ ಮಲ್ಲನಮೂಲೆ ಮಠದ ಐದನೇ ಪೀಠಾಧಿಪತಿಗಳಾದ ಶ್ರೀ ನಿರಂಜನ ಪ್ರಣವ ಮೂರ್ತಿ ಶ್ರೀ ಚನ್ನಬಸವ ಮಹಾಸ್ವಾಮೀಜಿಗಳು (81) ಸೋಮವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ.

ಅನಾರೋಗ್ಯ ನಿಮಿತ್ತ ಕಳೆದ 15 ದಿನಗಳಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶ ರಾಗಿದ್ದಾರೆ. ಲಿಂಗೈಕ್ಯರ ಅಂತ್ಯಕ್ರಿಯೆ ಮಂಗಳವಾರ ಮಲ್ಲನಮೂಲೆಯ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.

ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿ ಕೇಂದ್ರ ಮಹಾಸ್ವಾಮಿಗಳ ಸಮ್ಮುಖದಲ್ಲಿ ವಿಧಾನಗಳು ನಡೆಯಲಿದ್ದು, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಸ್ವಾಮೀಜಿಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಹಲವಾರು ರಾಜಕೀಯ ಗಣ್ಯರು, ಮಠಾಧಿಪತಿಗಳು ಸಂತಾಪ ಸೂಚಿಸಿದ್ದಾರೆ.