ನಂಜನಗೂಡು: ರಾಜ್ಯಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟಕ್ಕೆ ನಂಜನಗೂಡಿನ ದೇಬೂರು ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೈಸೂರಿನ ಸೆಂಟ್ ಫಿಲೋಮಿಯ ಶಾಲೆಯ ಆವರಣದಲ್ಲಿ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ದೈಹಿಕ ಶಿಕ್ಷಣ ವಿಭಾಗ, ಮೈಸೂರು ಇವರ ವತಿಯಿಂದ ಆಯೋಜಿಸಿದ್ದ ವಿಶೇಷ ಚೇತನ ಮಕ್ಕಳ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಂಜನಗೂಡಿನ ದೇಬೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಶೇಷ ಚೇತನ ಮಕ್ಕಳು ಭಾಗವಹಿಸಿ ವಿಜೇತರಾಗಿ ಇಬ್ಬರು ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.
ದೇಬೂರು ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅನನ್ಯ, ಕಾಲಿನ ವಿಕಲತೆಯ ವಿಭಾಗದದಲ್ಲಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, ಜಾವಲಿನ್ ಎಸೆತದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದರೆ, 8 ನೇ ತರಗತಿಯ ವಿದ್ಯಾರ್ಥಿ ತನುಶ್ರೀ, ಮೂಗ ಮತ್ತು ಕಿವುಡು ವಿಭಾಗದಲ್ಲಿ 100 ಮೀ ಓಟದ ಸ್ಪರ್ಧೆಯಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ಪ್ರಥಮ, ಜಾವಲಿನ್ ಎಸೆತದ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಮಕ್ಕಳ ತರಬೇತುದಾರರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ವೈ. ರವಿಕುಮಾರ್ ರವರ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಚಲುವರಾಜು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜು, ದೈಹಿಕ ಶಿಕ್ಷಣ ಶಿಕ್ಷಕ ವೈ.ರವಿಕುಮಾರ್ ಶಿಕ್ಷಕರಾದ ಶಿವಮ್ಮ, ಸುಜಯ, ನಶಿಮ್ ಹರ, ರತ್ನಮ್ಮ, ಪುಟ್ಟಗೌರಮ್ಮ, ಸುಮ, ಪದ್ಮಾವತಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

