ಮೈಸೂರು : ನಾಡದೇವಿ ಚಾಮುಂಡೇಶ್ವರಿಗೆ ಎರಡನೇ ಆಷಾಢ ಶುಕ್ರವಾರದ ವಿಶೇಷ ಪೂಜೆ ನಡೆಯಿತು. ನಾಡ ದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ ಹರಿದು ಬಂದಿದೆ.

ಶ್ರೀ ಚಾಮುಂಡೇಶ್ವರಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಬೆಳಿಗ್ಗೆ 6ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಯಿತು. ಚಾಮುಂಡಿ ಬೆಟ್ಟದಲ್ಲಿ ಕಳೆದ ವಾರ ಆಗಿದ್ದ ಅವ್ಯವಸ್ಥೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿತ್ತು.

ಬೆಳಗ್ಗೆ 5 ರಿಂದ ಸಂಜೆ 6 ರವರೆಗೆ ಮೆಟ್ಟಿಲು ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಧರ್ಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇತ್ತು. ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನವನ್ನು ಭಕ್ತರು ಪಡೆಯುತ್ತಿದ್ದಾರೆ.

ವಿವಿಧ ಬಗೆಯ ಹೂಗಳಿಂದ ದೇವಸ್ಥಾನವ ಗರ್ಭಗುಡಿ ಅಲಂಕಾರವಾಗಿದೆ. ಗುಲಾಬಿ, ತೆಂಗಿನಗರಿ, ಭತ್ತದ ತೆನೆ ಮೂಲಕ ಅಲಂಕಾರ ಮಾಡಲಾಗಿದ್ದು, ಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿ ಉತ್ಸವಮೂರ್ತಿ ಕಂಗೊಳಿಸುತ್ತಿತ್ತು. ನೂಕು ನುಗ್ಗುಲು ಉಂಟಾಗದ ರೀತಿಯಲ್ಲಿ ಬ್ಯಾರಿಕೆಡ್ ವ್ಯವಸ್ಥೆ ಮಾಡಲಾಗಿತ್ತು.

ಅಹಿತಕರ ಘಟನೆ ಜರುಗದಂತೆ ಪೊಲೀಸ್ ಭದ್ರತೆ ಕಲ್ಪಿಸಲಾಯಿತು. ಧರ್ಮ ದರ್ಶನ ಹಾಗೂ ಮೆಟ್ಟಿಲುಗಳ ಮೂಲಕವು ಭಕ್ತರು ಬೆಟ್ಟಕ್ಕೆ ಬರುತ್ತಿದ್ದರು. ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿಷೇಧವಿತ್ತು. ಲಲಿತಮಹಲ್ ಮೈದಾನದಿಂದ ಉಚಿತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕುಡಿಯುವ ನೀರು, ಶೌಚಾಲಯ, ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.