ನಂಜನಗೂಡು: ಐದು ವರ್ಷವೂ ಸಿದ್ದರಾಮಯ್ಯರವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದಾರೆ. ಯಾವುದೇ ಅನುಮಾನ ಬೇಡ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಾರ್ಯ ಸಿದ್ದಯ್ಯ ಸ್ವಾಮಿ ಹೇಳಿದರು.
ನಮ್ಮ ಅಪ್ಪ ರಾಜಕೀಯ ಕೊನೆಗಾಲದಲ್ಲಿದ್ದಾರೆ ಎಂಬ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ರವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾರ್ಯ ಸಿದ್ದಯ್ಯ ಸ್ವಾಮಿ ಅವರು, ಡಾ.ಯತೀಂದ್ರ ಸಿದ್ದರಾಮಯ್ಯರವರು ಹೇಳಿರುವುದು ಈ ಅವಧಿ ಅಂದರೆ, ಈ ಸರ್ಕಾರದ ಐದು ವರ್ಷವೂ ಕೊನೆಯ ತನಕ ಇರುತ್ತಾರೆ ಎಂಬ ಅರ್ಥದಲ್ಲಿ ಹೇಳಿದ್ದಾರೆ.
ಐದು ವರ್ಷವೂ ಅವರೇ ಸಿಎಂ ಆಗುತ್ತಾರೆ ಯಾವುದೇ ಅನುಮಾನ ಬೇಡ. ನಮ್ಮ ತಂದೆ ಸಂಪೂರ್ಣವಾಗಿ ಪೂರೈಸುತ್ತಾರೆ ಎಂಬುದು ನಿಜವಾದ ಅರ್ಥ. ಅದನ್ನು ಮಾಧ್ಯಮಗಳಲ್ಲಿ ತಿರುಚಲಾಗಿದೆ. ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯವು ಮಾದರಿಯಾಗಿದೆ. ರಾಜ ಮಹಾರಾಜರ ಕಾಲದಲ್ಲಿ ಮುತ್ತು ರತ್ನಗಳನ್ನು ಕೊಡುತ್ತಿದ್ದರು.
ಆದರೆ, ಸಿದ್ದರಾಮಯ್ಯರವರು ಯಾರು ಕೂಡ ಹಸಿದು ಮಲಗಬಾರದು ಎಂದು ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದು ಹಸಿವನ್ನು ನೀಗಿಸಿದ್ದಾರೆ. ವರುಣ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ. ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿಗೆ 5 ಕೋಟಿ ನೀಡಿದ್ದಾರೆ. ಕಾರ್ಯ, ಕೋಣನೂರು, ದಾಸನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ 10 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಾರೆ. ಈಗಾಗಲೇ 223 ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲು 140 ಕೋಟಿ ಅನುದಾನ ನೀಡಿದ್ದಾರೆ.
ಎಲ್ಲ ಬಡವರಿಗೆ ಅನುಕೂಲವಾಗುವಂತೆ ಸರ್ಕಾರವನ್ನು ನಡೆಸುತ್ತಿದ್ದಾರೆ. ಸರ್ಕಾರದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ಕೊನೆಗಾಲ ಎಂದರೆ ಇನ್ನು ಎರಡುವರೆ ವರ್ಷವೂ ಅವರೇ ಇರುತ್ತಾರೆ ಎನ್ನುವುದು ಅವರ ಅರ್ಥವಾಗಿದೆ ಎಂದು ಸ್ಪಷ್ಟಪಡಿಸಿದರು.

