ಮೈಸೂರು: ಮೈಸೂರು ಜಿಲ್ಲೆಯಲ್ಲಿ ಸಚಿವ ಯತೀಂದ್ರ ಅವರ ಏಕಚಕ್ರಾಧಿಪತ್ಯ ನಡೆಯುತ್ತಿದ್ದು, ತನ್ನ ಮಗನಿಗೋಸ್ಕರ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನ ಹಿರಿಯ ಶಾಸಕರಿಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದು ಮಾಜಿ ಎಂಎಲ್ʼಸಿ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. “ಮೈಸೂರು ಜಿಲ್ಲೆಯಲ್ಲಿ ಸಚಿವ ಯತೀಂದ್ರ ಮಹಾರಾಜನ ಏಕಚಕ್ರಾಧಿಪತ್ಯವಿದೆ. ಮಹದೇವಪ್ಪ, ತನ್ವೀರ್ ಸೇಠ್, ವೆಂಕಟೇಶ್ ಅವರಂತಹ ಹಿರಿಯ ನಾಯಕರಿಗೆ ಸಚಿವ ಸ್ಥಾನ ತಪ್ಪಿಸಿದ್ದೇ ಮಾಜಿ ಸಿಎಂ ಸಿದ್ದರಾಮಯ್ಯ. ತನ್ನ ಮಗನಿಗೋಸ್ಕರ ಕಾಂಗ್ರೆಸ್‌ನ ಹಿರಿಯ ಶಾಸಕರಿಗೆ ಸಚಿವ ಸ್ಥಾನ ತಪ್ಪಿಸಿದ್ದೇ ಸಿದ್ದರಾಮಯ್ಯ. ಇದೀಗ ಮೈಸೂರಿನಲ್ಲಿ ಯತೀಂದ್ರ ಮಹಾರಾಜನ ಏಕಚಕ್ರಾಧಿಪತ್ಯ ನಡೆಯುತ್ತಿದೆ” ಎಂದು ವಿಶ್ವನಾಥ್ ಕಿಡಿಕಾರಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಅಹಿಂದ ಜಪ ಮಾಡುತ್ತಿದ್ದಾರೆ. ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಅಹಿಂದ ಜಪ ಮಾಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯರಿಂದ ಅಹಿಂದ ಸಮುದಾಯಕ್ಕೆ ಯಾವುದೇ ಉಪಯೋಗ ಆಗಲಿಲ್ಲ. ಅಧಿಕಾರದಲ್ಲಿದ್ದಾಗ ಜಾತಿಗಣತಿ ವರದಿ ಬಿಡುಗಡೆ ಮಾಡಲಿಲ್ಲ. ಈಗ ಜಾತಿಗಣತಿ ವರದಿ ಬಿಡುಗಡೆ ಮಾಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈಗ ಮತ್ತೆ ಅಹಿಂದ ಸಮಾವೇಶ ಮಾಡಿದ್ದಾರೆ. ಆದರೆ ಅಹಿಂದ ಕಟ್ಟಿದ ಪ್ರಮುಖ ನಾಯಕರನ್ನು ಕಡೆಗಣಿಸಿದ್ದಾರೆ. ಡಾ. ಜಿ. ಪರಮೇಶ್ವರ್ ರಿಂದ ಅಹಿಂದ ಸಮಾವೇಶ ಉದ್ಘಾಟನೆ ಮಾಡಿಸಿದ್ದಾರೆ. ಈ ಹಿಂದೆ ಪರಮೇಶ್ವರ್ ಚುನಾವಣೆಯಲ್ಲಿ ಸೋಲಲು ಇದೇ ಸಿದ್ದರಾಮಯ್ಯ ಕಾರಣರು. ಈ ಬಗ್ಗೆ ಹಲವಾರು ಬಾರಿ ಸ್ವತಃ ಪರಮೇಶ್ವರ್ ಕೂಡ ಹೇಳಿದ್ದಾರೆ. ಆದರೀಗ ಅದೇ ಪರಮೇಶ್ವರ್ ಕೈಯಲ್ಲಿ ಅಹಿಂದ ಸಮಾವೇಶ ಉದ್ಘಾಟನೆ ಮಾಡಿಸಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

ಮಹದೇವಪ್ಪ ಮನೆ ತೆರವು ದಲಿತ ವಿರೋಧಿ ನಡೆ: ಸಚಿವ ಮಹದೇವಪ್ಪ ವಾಸವಿರುವ ಮನೆಯ ಒಂದು ಭಾಗವನ್ನು ಸಚಿವ ಭೈರತಿ ಸುರೇಶ್ ಅಣತಿಯ ಮೇರೆಗೆ ಕೆಡವಲಾಗಿದೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ಭೈರತಿ ಸುರೇಶ್ ಈ ರೀತಿ ಮಾಡಿಸಿದ್ದಾರೆ. ಮಹದೇವಪ್ಪ ಮನೆಯಲ್ಲಿ ವಾಸವಿರುವಾಗಲೇ ಈ ರೀತಿ ಮಾಡಿರುವುದು ಸರಿಯಲ್ಲ. ಇದು ದಲಿತ ವಿರೋಧಿ ನಡೆಯಾಗಿದೆ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

“ಈ ಹಿಂದೆ ಅಧಿಕಾರದಲ್ಲಿ ಇದ್ದ ಎಲ್ಲರೂ ಮನೆ ಖಾಲಿ ಮಾಡಿದ್ದಾರಾ? ಸಿದ್ದರಾಮಯ್ಯ ವಾಸವಿದ್ದ ಮನೆಯನ್ನು ಖಾಲಿ ಮಾಡಿಲ್ಲ. ಮಹದೇವಪ್ಪನಿಗೆ ಮಾತ್ರ ಯಾಕೆ ಈ ರೀತಿ ಮಾಡಿದ್ದಾರೆ?” ಎಂದು ಅವರು ಪ್ರಶ್ನಿಸಿದರು.