ಮೈಸೂರು: ಶ್ರೀಮಂತರ ಸೋಗಿನಲ್ಲಿ ಫರ್ನಿಚರ್ ಅಂಗಡಿಯೊಂದಕ್ಕೆ ಬಂದ ಕೇರಳಾ ಮೂಲದ ಕುಟುಂವೊಂದು ಮಾಲೀಕನಿಗೆ 99.65 ಲಕ್ಷ ವಂಚಿಸಿದ ಪ್ರಕರಣ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಂಚನೆಗೆ ಒಳಗಾದ ಅಂಗಡಿ ಮಾಲೀಕ ಒಂದೇ ಕುಟುಂಬದ 5 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಹೂಟಗಳ್ಳಿಯಲ್ಲಿರುವ ಟ್ರೀ ಟ್ರೆಂಡ್ಸ್ ಅಂಗಡಿ ಮಾಲೀಕ ಎ.ಸಿ.ರಾಯ್ ವಂಚನೆಗೆ ಒಳಗಾದವರು. ಕೇರಳಾ ರಾಜ್ಯ ಕ್ಯಾಲಿಕಟ್ ನ ಹಕ್ಕಿನ್, ಹಫ್ತಾತ್ ಬೀವಿ, ಮೊಹಮದ್ ಖಾಲೀಸ್, ಮೊಹಮದ್ ವಾಸೀಲ್, ಪ್ರವೀಜ್ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.

ಶ್ರೀಮಂತರ ಸೋಗಿನಲ್ಲಿ ಐಶಾರಾಮಿ ಕಾರಿನಲ್ಲಿ ಫರ್ನಿಚರ್ ಅಂಗಡಿಗೆ ಬಂದ ಹಕ್ಕಿನ್ ಹಾಗೂ ಕುಟುಂಬ ತಾನು ಕೇರಳಾದಲ್ಲಿ ಎರಡು ಮನೆ ಖರೀದಿಸಿದ್ದು ಫರ್ನಿಚರ್ ಗಳು ಬೇಕೆಂದು ನಂಬಿಸಿದೆ. ವಾಟ್ಸಪ್ ವೀಡಿಯೋ ಕಾಲ್ ನಲ್ಲಿ ತನ್ನ ಮನೆಯನ್ನ ತೋರಿಸಿ ಇಂಜಿನಿಯರ್ ಜೊತೆ ಮಾತನಾಡಿಸಿ  ಹೆಚ್ಚು ಬೆಲೆ ಬಾಳುವ ಪೀಠೋಪಕರಣಗಳನ್ನ ಖರೀದಿಸಿದೆ.40 ಲಕ್ಷ ಮೌಲ್ಯದ ಫರ್ನಿಚರ್ ಖರೀದಿಸಿ ಪ್ಯಾಕ್ ಮಾಡುವಂತೆ ತಿಳಿಸಿ ಖಾಲಿ ಚೆಕ್ ಗಳನ್ನ ನೀಡಿ ತಾನು ಹೇಳಿದ ದಿನ ಚೆಕ್ ಬ್ಯಾಂಕ್ ಗೆ ಪ್ರೆಸೆಂಟ್ ಮಾಡುವಂತೆ ತಿಳಿಸಿ ಚೆಕ್ ಕ್ಯಾಶ್ ಆದ ನಂತರ ಫರ್ನಿಚರ್ ಗಳನ್ನ ಕಳುಹಿಸುವಂತೆ ಸೂಚನೆ ನೀಡಿ ತೆರಳಿದ್ದಾರೆ.

ಒಂದೆರಡು ದಿನಗಳ ನಂತರ ಖಾಲಿ ಚೆಕ್ ನಲ್ಲಿ 40 ಲಕ್ಷ ತುಂಬಿ ಹಕ್ಕಿನ್ ನ ಅನುಮತಿಯಂತೆ ಬ್ಯಾಂಕ್ ಗೆ ನಗದೀಕರಿಸಲು ಹಾಕಿದ್ದಾರೆ.ಆದ್ರೆ ಚೆಕ್ ಹಣವಿಲ್ಲದೆ ಬೌನ್ಸ್ ಆಗಿದೆ. ಈ ವಿಚಾರ ಹಕ್ಕಿನ್ ಗೆ ತಿಳಿಸಿದಾಗ ತಾನೇ ಬರುವುದಾಗಿ ತಿಳಿಸಿದ್ದಾನೆ. ಕೆಲವು ದಿನಗಳ ನಂತರ ಅಂಗಡಿಗೆ ಬಂದ ಹಕ್ಕಿನ್ ತನ್ನ ಖಾತೆಯಲ್ಲಿ 124  ಕೋಟಿ ಬ್ಯಾಲೆನ್ಸ್ ಇದೆ ಐಟಿ ರವರು ಫ್ರೀಜ್ ಮಾಡಿದ್ದಾರೆ. ಆದ್ರಿಂದ ಚೆಕ್ ಬೌನ್ಸ್ ಆಗಿದೆ ಎಂದು ಹೇಳಿ ಹಲವಾರು ದಾಖಲೆಗಳನ್ನ ತೋರಿಸಿ ನಂಬಿಸಿದ್ದಾನೆ.

ಅಕೌಂಟ್ ಅನ್ ಫ್ರೀಜ್ ಆದರೆ ನಿನ್ನ ಬಳಿಯೇ ಫರ್ನಿಚರ್ ಗಳನ್ನ ಖರೀದಿ ಮಾಡ್ತೀನಿ ಅಲ್ಲದೆ ತನಗೆ ಬರುವ ಹಣದಲ್ಲಿ 25 % ಕಮೀಷನ್ ಸಹ ಕೊಡುವುದಾಗಿ ಆಮಿಷವೊಡ್ಡಿ ಹಕ್ಕಿನ್ ನಂಬಿಸಿ ಅಕೌಂಟ್ ಅನ್ ಫ್ರೀಜ್ ಮಾಡಲು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ಹಕ್ಕಿನ್ ತೋರಿಸಿದ ದಾಖಲೆಗಳು ಹಾಗೂ ಮೋಡಿ ಮಾತುಗಳನ್ನ ನಂಬಿದ ರಾಯ್ ರವರು ಹಂತ ಹಂತವಾಗಿ 99,65,500/- ರೂ ಕೊಟ್ಟಿದ್ದಾರೆ.

ಲಕ್ಷಾಂತರ ಹಣ ಬಂದ ನಂತರ ಹಕ್ಕಿನ್ ಈ ಸಮಸ್ಯೆಗೆ ಇಲ್ಲಿ ಪರಿಹಾರ ಸಿಗುವುದಿಲ್ಲ ದೆಹಲಿಯಿಂದಲೇ ಬಗೆಹರಿಸಬೇಕೆಂದು ಮತ್ತಷ್ಟು ಹಣದ ಸಹಾಯ ಕೇಳಿ ಮತ್ತೊಂದು ಕೋಟ್ಯಾಂತರ ವಹಿವಾಟಿನ ಆಮಿಷ ತೋರಿಸಿದ್ದಾನೆ. ಈ ಸಂದರ್ಭದಲ್ಲಿ ರಾಯ್ ರವರಿಗೆ ತಾವು ಮೋಸ ಹೋಗಿರುವುದು ಖಚಿತವಾಗಿದೆ. ಸದ್ಯ ಹಕ್ಕಿನ್ ಸೇರಿದಂತೆ ಕುಟುಂಬದ 5 ವಿರುದ್ದ ರಾಯ್ ಪ್ರಕರಣ ದಾಖಲಿಸಿದ್ದಾರೆ.