ನಂಜನಗೂಡು: ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ರವರ ಮೇಲೆ ಶೂ ಎಸೆದು ಅಪಮಾನ ಮಾಡಿರುವ ವಕೀಲನನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ಆಗ್ರಹಿಸಿದ್ದಾರೆ.
ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ಇದು ಕಪ್ಪು ಚುಕ್ಕೆಯಾಗಿದೆ. ಸಂವಿಧಾನಾತ್ಮಕವಾಗಿ ಸುಪ್ರೀಂ ಕೋರ್ಟ್ ನಲ್ಲಿ ಉನ್ನತ ಹುದ್ದೆಯಲ್ಲಿರುವ ಮುಖ್ಯನ್ಯಾಯಮೂರ್ತಿಯ ಮೇಲೆ ವಕೀಲನು ಶೂ ಎಸೆದು ಅಪಮಾನ ಮಾಡಿರುವುದು ಖಂಡನೀಯ. ಇದನ್ನು ರೈತ ಸಂಘ ಮತ್ತು ಹಸಿರು ಸೇನೆ ತೀವ್ರವಾಗಿ ಖಂಡಿಸುತ್ತದೆ.
ಇದು ದೇಶದ್ರೋಹ ಕೃತ್ಯ ಮತ್ತು ಸಂವಿಧಾನದ ಮೇಲೆ ನಡೆದ ವ್ಯವಸ್ಥಿತ ದಾಳಿ. ಧರ್ಮದ ಹೆಸರಿನಲ್ಲಿ ಈ ರೀತಿಯ ಅಸಹಿಷ್ಣುತೆಯ ನಡೆ ದೇಶದ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ. ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಿ ಗಲ್ಲು ಶಿಕ್ಷೆ ವಿಧಿಸಬೇಕು. ಈ ದೇಶದ ಕಾನೂನು ಮತ್ತು ಸಂವಿಧಾನ ಉಳಿಯಬೇಕು ಎಂದು ಒತ್ತಾಯಿಸಿದರು.

