ನಂಜನಗೂಡು: ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ರವರ ಮೇಲೆ ಶೂ ಎಸೆದು ಅಪಮಾನ ಮಾಡಿರುವ ವಕೀಲನನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ನಂಜನಗೂಡಿನಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು.

ನಂಜನಗೂಡು ನಗರದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಮತ್ತು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಮಾತನಾಡಿ, ಸಂವಿಧಾನಾತ್ಮಕವಾಗಿ ಸುಪ್ರೀಂ ಕೋರ್ಟ್ ನಲ್ಲಿ ಉನ್ನತ ಹುದ್ದೆಯಲ್ಲಿರುವ ಮುಖ್ಯನ್ಯಾಯಮೂರ್ತಿಯ ಮೇಲೆ ವಕೀಲನು ಶೂ ಎಸೆದು ಅಪಮಾನ ಮಾಡಿರುವುದು ಖಂಡನೀಯ. ಇದನ್ನು ರೈತ ಸಂಘ ಮತ್ತು ಹಸಿರು ಸೇನೆ ತೀವ್ರವಾಗಿ ಖಂಡಿಸುತ್ತೇವೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಅವರ ಮೇಲೆ ಕೋಮುವಾದಿ ವಕೀಲ ಶೂ ಎಸೆಯಲು ಪ್ರಯತ್ನ ಮಾಡಿದ್ದಾರೆ.

ಇದು ಅವರಿಗೆ ಆಗಿರುವ ಅಪಮಾನವಲ್ಲ ಇಡೀ ದೇಶಕ್ಕೆ ಅಪಮಾನವಾಗಿದೆ. ಕೂಡಲೇ ವಕೀಲನ ಬಾರ್ ಕೌನ್ಸಲಿಂಗ್ ಪರವಾನಿಗೆ ರದ್ದು ಮಾಡಬೇಕು. ಯಾವುದೇ ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡುವುದನ್ನು ರದ್ದುಪಡಿಸಬೇಕು. ಸೂಕ್ತ ಕಠಿಣ ಕಾನೂನು ರೀತಿ ಕ್ರಮ ಕೈಗೊಂಡು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ರೈತ ಸಂಘದ ಅಧ್ಯಕ್ಷ ಬಂಗಾರಸ್ವಾಮಿ, ಹಳೇಪುರ ಮಹದೇವಸ್ವಾಮಿ, ಕವಲಂದೆ ಗುರುಸ್ವಾಮಿ, ಬಸವರಾಜು, ಆನಂದ್, ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಶ್ರೀಕಂಠ, ಕೃಷ್ಣಮೂರ್ತಿ ಬಸವಟ್ಟಿಗೆ, ಲೋಕೇಶ್, ಸಂದೀಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.