ನಂಜನಗೂಡು : ದಕ್ಷಿಣ ಕಾಶಿ ನಂಜನಗೂಡಿನ ಕಪಿಲಾ ನದಿಗೆ ಕೊಳಚೆ ಚರಂಡಿ ನೀರು ಸೇರಿಕೊಂಡು ದುರ್ನಾತ ಬೀರುತ್ತಿದೆ. ಕಪಿಲೆಯ ಒಡಲಿಗೆ ಪಟ್ಟಣದ ಕೊಳಚೆ ನೀರು ಹಾಗೂ ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದ ಕೊಳಚೆ ನೀರು ಸೇರಿ ಮಲಿನವಾಗುತ್ತಿದೆ.

ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಬರುವ ಭಕ್ತರು, ಪಾಪ ಪುಣ್ಯಗಳನ್ನು ಕಳೆದುಕೊಳ್ಳಲು ಬರುವ ಕೊಳಚೆ ನೀರಿನಲ್ಲಿ ಮಿಂದು ರೋಗರುಜಿನಗಳಿಗೆ ಸಿಲುಕುತ್ತಿದ್ದಾರೆ. ಕೊಳಚೆ ನೀರು ಸರಾಗವಾಗಿ ಹರಿದು ಕಪಿಲಾ ನದಿಯನ್ನು ಸೇರುತ್ತಿದ್ದರೂ ನಗರಸಭಾ ಅಧಿಕಾರಿಗಳು ಕ್ಯಾರೇ ಎಂದಿಲ್ಲ.

ನಂಜನಗೂಡು ಪಟ್ಟಣದಿಂದ ಹರಿದು ಬರುವ ಚರಂಡಿ ನೀರು ಬಸ್ ನಿಲ್ದಾಣದ ಬಳಿ ಕಪಿಲಾ ನದಿಯನ್ನ ಸೇರುತ್ತಿದೆ. ಇದೇ ನೀರಿನಲ್ಲಿ ಭಕ್ತರು ಸ್ನಾನ ಮಾಡಿ ಪಾಪ ಪುಣ್ಯಗಳನ್ನ ಕಳೆದುಕೊಳ್ಳಲು ಬರುತ್ತಾರೆ. ನಗರಸಭೆ ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಈಗಾಗಲೇ ಬೇಸಿಗೆ ಆರಂಭವಾಗಿದೆ.

ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಇಂತಹ ಸಂಧರ್ಭದಲ್ಲಿ ಮಲಿನಗೊಂಡಿರುವ ಕಪಿಲೆಯಲ್ಲಿ ಸ್ನಾನ ಮಾಡುವ ಭಕ್ತರು ರೋಗಪೀಡಿತರಾಗುವ ಸಂಭವ ಇದೆ. ಕೊಳಚೆ ನೀರು ಕಪಿಲಾ ನದಿ ಸೇರುವುದನ್ನು ನಿಯಂತ್ರಿಸಲು ತಡೆಗೋಡೆ ‌ನಿರ್ಮಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕೆಲವೇ ದಿನಗಳಲ್ಲಿ ದಕ್ಷಿಣಕಾಶಿಯಲ್ಲಿ ದೊಡ್ಡಜಾತ್ರಾ ಮಹೋತ್ಸವ ನಡೆಯಲಿದೆ.

ಸಹಸ್ರಾರು ಭಕ್ತರು ನಂಜನಗೂಡಿಗೆ ಭೇಟಿ ನೀಡುತ್ತಾರೆ. ಕಪಿಲೆಯಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ಮಲಿನ ನೀರು ಭಕ್ತರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಾರಾ ಕಾದುನೋಡಬೇಕಿದೆ.