ನಂಜನಗೂಡು: ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಸಿದ್ದರಾಮಯ್ಯ ಮತ್ತು ಹಾಲಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದಲ್ಲೇ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಕ್ಷೇತ್ರದ ಜನರು ಮೂಲಭೂತ ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ.

ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಮುಖ್ಯ ರಸ್ತೆ ಕಳೆದ ದಶಕದಿಂದಲೂ ಹದಗೆಟ್ಟಿದೆ. ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೆ ಪ್ರತಿನಿತ್ಯ ಗ್ರಾಮಸ್ಥರು ಧೂಳಿನಲ್ಲಿ ಓಡಾಡಬೇಕಾಗಿದೆ. ಚರಂಡಿ ನೀರು ನೇರವಾಗಿ ರಸ್ತೆಗೆ ಹರಿಯುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು, ಗ್ರಾಮಸ್ಥರು ಓಡಾಡುತ್ತಾರೆ. ಮಳೆ ಬಂದರೆ ಕೆಸರು, ಬಿಸಿಲು ಬಂದರೆ ಧೂಳು. ಜನಪ್ರತಿನಿಧಿಗಳು ಮಾತ್ರ ಬಂದು ಹೋಗುತ್ತಾರೆ, ಸಮಸ್ಯೆ ಮಾತ್ರ ಹಾಗೆಯೇ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ ಅವರು ನಂಜನಗೂಡು ತಾಲ್ಲೂಕಿನ ತಾಯೂರು ಗೇಟ್ ಬಳಿ 501.85 ಕೋಟಿ ರೂ. ವೆಚ್ಚದಲ್ಲಿ ವರುಣ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಅದರಲ್ಲಿ ಕಕ್ಕರಹಟ್ಟಿ – ಚುಂಚನಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ ಮತ್ತು ಚುಂಚನಹಳ್ಳಿ – ಪಿ. ಮರಹಳ್ಳಿ ವರೆಗೆ ಮರು ಡಾಂಬರೀಕರಣಕ್ಕೆ ಸುಮಾರು 8 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು.

ಕಾಮಗಾರಿಗೆ ಚಾಲನೆ ನೀಡಿ ವರ್ಷ ಕಳೆಯುತ್ತಾ ಬಂದಿದ್ದರೂ ಇಲ್ಲಿಯವರೆಗೆ ಒಂದು ಸಲಿಕೆಯೂ ಕೆಲಸ ಪ್ರಾರಂಭವಾಗಿಲ್ಲ. ಅನುದಾನ ಬಂದೂ ಕಾಮಗಾರಿ ಆಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸಿ, ರಸ್ತೆ ಮತ್ತು ಚರಂಡಿ ನಿರ್ಮಾಣವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ವರುಣ ಕ್ಷೇತ್ರವು ಮೈಸೂರು, ನಂಜನಗೂಡು, ತಿ.ನರಸೀಪುರ ತಾಲ್ಲೂಕುಗಳನ್ನು ಒಳಗೊಂಡಿದೆ. ಆದರೆ, ಕ್ಷೇತ್ರದ ಜನರ ಸಮಸ್ಯೆ ಕೇಳುವವರೇ ಇಲ್ಲ ಎಂಬುದು ಸ್ಥಳೀಯರ ಆರೋಪ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರದ ಕಡೆ ತಿರುಗಿ ನೋಡಿಲ್ಲ. ಉಸ್ತುವಾರಿ ನೋಡಿಕೊಳ್ಳುತ್ತಿರುವ ಅವರ ಪುತ್ರ ಡಾ. ಯತೀಂದ್ರ ಅವರು ಮೊದಲೆ ಸಿಗುತ್ತಿರಲಿಲ್ಲ. ಕಾರ್ಯಕರ್ತರಿಗೆ ಮಾತ್ರ ಸೀಮಿತರಾಗಿದ್ದಾರೆ. ಸಚಿವರಾದ ಮೇಲೆ ಜನರ ಕೈಗೆ ಸಿಗುವುದು ಇನ್ನೂ ಕಷ್ಟವಾಗಿದೆ ಎಂದು ಜನರು ದೂರಿದ್ದಾರೆ.

ಯುದ್ಧ ನಡೆಯುತ್ತಿರುವುದರಿಂದ ಡಾಂಬರು ಸಿಗುತ್ತಿಲ್ಲ. ಈಗಾಗಲೇ ನಾವು ಮಾಡಿರುವ ಕಾಮಗಾರಿಗಳಿಗೆ ಇನ್ನೂ ಪೇಮೆಂಟ್ ಆಗಿಲ್ಲ. ಒಂದು ಟನ್ ಡಾಂಬರ್ ಗೆ 45 ಸಾವಿರ ಇತ್ತು. ಯುದ್ಧದಿಂದ ಈಗ ಒಂದು ಟನ್ ಗೆ 92 ಸಾವಿರ ಆಗಿದೆ. ‌ ಇದರಿಂದ ನಮಗೂ ಕಾಮಗಾರಿ ನಡೆಸಲು ತುಂಬಾ ತೊಂದರೆಯಾಗಿದೆ. ಇನ್ನೊಂದು ವಾರದ ಒಳಗಡೆ ಕಾಮಗಾರಿಯನ್ನು ಪ್ರಾರಂಭಿಸಿ, ಆದಷ್ಟು ಬೇಗ ಪೂರ್ಣಗೊಳಿಸುತ್ತೇನೆ.
-ಕೃಷ್ಣ, ಗುತ್ತಿಗೆದಾರರು.

ಕಕ್ಕರಹಟ್ಟಿ – ಚುಂಚನಹಳ್ಳಿ ರಸ್ತೆ ಡಾಂಬರೀಕರಣ ವಿಳಂಬದ ಬಗ್ಗೆ ಈಗಾಗಲೇ ಗುತ್ತಿಗೆದಾರರು ಮತ್ತು ಇಂಜಿನಿಯರ್ ಜೊತೆ ಮಾತನಾಡಿದ್ದೇನೆ. ಆದಷ್ಟು ಬೇಗ ಕಾಮಗಾರಿಯನ್ನು ಪ್ರಾರಂಭಿಸುವಂತೆ ತಿಳಿಸಿದ್ದೇನೆ. ವಾರ್ ನಡೆಯುತ್ತಿರುವುದರಿಂದ ಡಾಂಬರು ಸಿಗುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ. ಇನ್ನೆರಡು ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ.
-ಕೃಷ್ಣೇಗೌಡ, ಎಇಇ ಲೋಕೋಪಯೋಗಿ ಇಲಾಖೆ, ವರುಣಾ ವಿಧಾನಸಭಾ ಕ್ಷೇತ್ರ.

ಚುಂಚನಹಳ್ಳಿ ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ ಕಾಣದೆ, ತುಂಬಾ ಹದಗೆಟ್ಟಿದೆ. ಗ್ರಾಮಸ್ಥರಿಗೆ ದಿನ ನಿತ್ಯ ದೂಳಿನ ದರ್ಶನವಾಗುತ್ತದೆ. ಚರಂಡಿ ಮತ್ತು ರಸ್ತೆ ಸಮಸ್ಯೆಯಿಂದ ತುಂಬಾ ತೊಂದರೆಯಾಗಿದೆ. ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯರವರು ಅನುದಾನ ಬಿಡುಗಡೆ ಮಾಡಿ ವರ್ಷ ಕಳೆಯುತ್ತಾ ಬಂದಿದೆ. ಆದರೂ ರಸ್ತೆ ಕಾಮಗಾರಿ ಪ್ರಾರಂಭವಾಗಿಲ್ಲ. ವ್ಯವಸ್ಥಿತ ಚರಂಡಿ ಇಲ್ಲದೆ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಗ್ರಾಮಕ್ಕೆ ಇದೇ ಮುಖ್ಯ ರಸ್ತೆ ಆಗಿರುವುದರಿಂದ ದಿನನಿತ್ಯ ದಿನ ಓಡಾಡುತ್ತಾರೆ. ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ಬರುತ್ತಾರೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಆದ್ದರಿಂದ ರಸ್ತೆಯನ್ನು ಅಭಿವೃದ್ಧಿಪಡಿಸಿ ಡಾಂಬರೀಕರಣ ಮಾಡಬೇಕು.
-ಡಿ.ಎಂ ಮಹದೇವ್ ಮಾಜಿ ಗ್ರಾ.ಪಂ ಸದಸ್ಯರು ಚುಂಚನಹಳ್ಳಿ.

-ಸಿ.ಎಂ ಸುಗಂಧರಾಜು